ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆಯಂಗಡಿ ಕದಿಕೆ ಚಿತ್ರಾಪು ಮೀನುಗಾರಿಕಾ ರಸ್ತೆ ಅವ್ಯವಸ್ಥೆಗಳ ಆಗರವಾಗಿದ್ದು ಸಂಚಾರ ದುಸ್ತರವಾಗಿದೆ.
ಮೀನುಗಾರಿಕಾ ರಸ್ತೆಯ ಕದಿಕೆ ಭಂಡಾರ ಮನೆ, ಸಾಲ್ಯಾನ್ ಮೂಲಸ್ಥಾನದ ಬಳಿ, ಹಾಗೂ ಹಳೆಯಂಗಡಿ ಮತ್ತು ಸಸಿಹಿತ್ಲು ಸಂಪರ್ಕ ಕಲ್ಪಿಸುವ ಕದಿಕೆ ಸೇತುವೆ ಬಳಿ ರಸ್ತೆ ತೀವ್ರ ನಾದುರಸ್ಥಿಯಲ್ಲಿದ್ದು ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ಭಾಗದಲ್ಲಿ ಎಗ್ಗಿಲ್ಲದೆ ಮರಳು ಹಾಗೂ ಮಣ್ಣು ಸಾಗಾಟದ ಟಿಪ್ಪರ್ ಗಳು ಸಂಚರಿಸುತ್ತಿದ್ದು ರಸ್ತೆ ಅಧೋಗತಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ನಡುವೆ ಸಸಿಹಿತ್ಲು ಸಂಪರ್ಕ ಕಲ್ಪಿಸುವ ಕದಿಕೆ ಸೇತುವೆ ಬಳಿ ರಸ್ತೆ ಇಕ್ಕೆಲಗಳಲ್ಲಿ ಅಪಾಯಕಾರಿ ಹುಲ್ಲು ಬೆಳೆದಿದ್ದು ತಿರುವಿನಲ್ಲಿ ಎದುರಿನಿಂದ ವಾಹನವನ್ನು ನೋಡಲು ಹಾಕಿರುವ ದರ್ಪಣವನ್ನು ಯಾರೋ ಕಿಡಿಗೇಡಿಗಳು ನಾಶಪಡಿಸಿದ್ದಾರೆ.
ಈ ಪರಿಸರದಲ್ಲಿ ಕೆಲ ದುಷ್ಕರ್ಮಿಗಳು ತ್ಯಾಜ್ಯವನ್ನು ತಂದು ಬಿಸಾಡುತ್ತಿದ್ದು. ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ.
ಕೂಡಲೇ ಹಳೆಯಂಗಡಿ ಪಂಚಾಯತ್ ಆಡಳಿತ ರಸ್ತೆ ದುರಸ್ತಿ ಪಡಿಸಲು ಮೀನುಗಾರಿಕಾ ಇಲಾಖೆಗೆ ಸೂಚನೆ ನೀಡುವುದರ ಜೊತೆಗೆ ರಸ್ತೆ ಬದಿ ಬೆಳೆದಿರುವ ಅಪಾಯಕಾರಿ ಹುಲ್ಲು ತೆರವುಗೊಳಿಸಿ ಪರಿಸರವನ್ನು ತ್ಯಾಜ್ಯ ಮುಕ್ತ ಮಾಡಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
Kshetra Samachara
10/01/2022 08:30 am