ಮುಲ್ಕಿ: ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೆಳ್ಳಾಯರು ಉತ್ರಂಜೆ ಬಳಿ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರು ಸಂಪರ್ಕ ರಸ್ತೆಗೆ ಮನವಿ ಸಲ್ಲಿಸಿದ್ದು ರೈಲ್ವೆ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮುಗಿಯದ ಗೋಳಾಗಿದೆ.
ಬೆಳ್ಳಾಯರು ಉತ್ರಂಜೆ ಪರಿಸರದಲ್ಲಿ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರು ಕೃಷಿ ಮಾಡಿಕೊಂಡಿದ್ದು ಕೊಂಕಣ ರೈಲ್ವೆ ಹಾದು ಹೋಗುವುದರಿಂದ ಸೂಕ್ತ ರಸ್ತೆಇಲ್ಲದೆ ಕೃಷಿ ಅತಂತ್ರವಾಗಿದೆ.
ಈ ಪರಿಸರದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿದ್ದ ಹಿರಿಯ ಕೃಷಿಕ ಭುಜಂಗಶೆಟ್ಟಿ ಸಹಿತ ಅನೇಕ ಗ್ರಾಮಸ್ಥರ ಮನೆಗಳಿಗೆ ಕೊಂಕಣ ರೈಲ್ವೆ ಹಳಿಗಳನ್ನು ದಾಟಿ ನಡೆದುಕೊಂಡೆ ಹೋಗಬೇಕಾಗಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ಪಡುಪಣಂಬೂರು ಕಲ್ಲಾಪು ಪ್ರದೇಶದಿಂದ ಮುಲ್ಕಿ ರೈಲ್ವೆ ನಿಲ್ದಾಣಕ್ಕೆ ಹೋಗುವವರಿಗೆ, ಶಾಲಾ ಮಕ್ಕಳಿಗೆ ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದೆ ಅಪಾಯಕಾರಿ ವಿದ್ಯುತೀಕರಣ ಗೊಂಡ ರೈಲ್ವೆ ಹಳಿಯ ಮೇಲೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ.
ಈ ಬಗ್ಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸ್ಥಳೀಯ ಸಂಸದರು, ಶಾಸಕರಿಗೂ ಸ್ಥಳೀಯಾಡಳಿತಕ್ಕೂ ಮನವಿ ಸಲ್ಲಿಸಿದ್ದು ಕೂಡಲೇ ಸ್ಪಂದಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಹಿರಿಯ ಕೃಷಿಕ ಭುಜಂಗ ಶೆಟ್ಟಿ ಮಾತನಾಡಿ ಪಡುಪಣಂಬೂರು ಕಲ್ಲಾಪು ರೈಲ್ವೆ ಕ್ರಾಸಿಂಗ್ ಬಳಿಯಿಂದ ಎಡಬದಿಯಲ್ಲಿ ಸೂಕ್ತ ಸರ್ವೀಸ್ ರಸ್ತೆ ಅಥವಾ ಉತ್ರಂಜೆ ಬಳಿ ಕೊಂಕಣ ರೈಲ್ವೆ ಹಳಿಗೆ ಅಂಡರ್ ಪಾಸ್ ನಿರ್ಮಾಣದ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
Kshetra Samachara
29/11/2021 01:49 pm