ಸುರತ್ಕಲ್: ಇಲೆಕ್ಟ್ರಿಕಲ್ ವಿಭಾಗದ ಟೆಂಡರ್ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸದಿರುವ ಕಾರಣ ಎಂಆರ್ಪಿಎಲ್ ಹಂತ 3ರ ಸುಮಾರು 57 ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ.
ಈ ಬಗ್ಗೆ 57 ಕಾರ್ಮಿಕರ ಹಾಗೂ ಅವರ ಕುಟುಂಬದ ಬದುಕನ್ನು ಕೇವಲವಾಗಿ ಪರಿಗಣಿಸಿ ಬೇಜವಾಬ್ದಾರಿಯುತ ನಡೆಯನ್ನು ಪ್ರದರ್ಶಿಸಿರುವ ಇಲೆಕ್ಟ್ರಿಕಲ್ ವಿಭಾಗ ಹಾಗೂ ಆಡಳಿತ ಮಂಡಳಿಯ ಅಧಿಕಾರಿಗಳ ವಿರುದ್ಧ ಎಂಆರ್ಪಿಎಲ್-ಒಎನ್ ಜಿಸಿ ಕರ್ಮಚಾರಿ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಎಂಆರ್ಪಿಎಲ್ ಕಾರ್ಗೋಗೇಟ್ ಮುಂದೆ ಉಪವಾಸ ಸತ್ಯಾಗ್ರಹದಲ್ಲಿ ಕುಳಿತುಕೊಂಡಿದ್ದಾರೆ.
ಈ ವಿಷಯವನ್ನು ಎಂಆರ್ಪಿಎಲ್ ಆಡಳಿತ ಮಂಡಳಿಯ ಗಮನಕ್ಕೆ ತರಲಾಗಿದೆ. ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ಆಗಬಹುದಾದ ಅನಾಹುತಕ್ಕೆ ಇಲೆಕ್ಟ್ರಿಕಲ್ ವಿಭಾಗದ ಅಧಿಕಾರಿಗಳೇ ಕಾರಣರಾಗಿರುತ್ತಾರೆ ಎಂದು ಯೂನಿಯನ್ ಪದಾಧಿಕಾರಿಗಳು ಆಗ್ರಹಿಸಿದರು.
ಉಪವಾಸ ಸತ್ಯಾಗ್ರಹಕ್ಕೆ ಬೆಂಬಲವಾಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಹಾಗೂ ಸ್ಥಳೀಯ ಮ.ನ.ಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ ಮತ್ತು ಲಕ್ಷ್ಮಿಶೇಖರ್ ದೇವಾಡಿಗ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ನೈತಿಕ ಬೆಂಬಲ ಸೂಚಿಸಿ, ಆಡಳಿತ ಮಂಡಳಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ತುರ್ತಾಗಿ ಸಮಸ್ಯೆ ಬಗೆಹರಿಸಲು ಸೂಚಿಸಿದರು..
Kshetra Samachara
24/11/2021 03:26 pm