ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ಪ್ರಧಾನ ರಸ್ತೆಯ ಬದಿಯಲ್ಲಿರುವ ಶಾಂಭವಿ ರೆಸಿಡೆನ್ಸ್ ಬಹುಮಹಡಿ ಕಟ್ಟಡದ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಅನೇಕ ಬಾರಿ ಮುಲ್ಕಿ ನಗರ ಪಂಚಾಯತ್ ತಿಳಿಸಿದರೂ. ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ. ಶುಕ್ರವಾರ ವರಮಹಾಲಕ್ಷ್ಮಿ ವೃತ ಹಬ್ಬದ ಸಂಭ್ರಮದಲ್ಲಿರುವ ಬಪ್ಪನಾಡು ದೇವಸ್ಥಾನಕ್ಕೆ ಅನೇಕ ಭಕ್ತರು ಬಂದಿದ್ದು ತ್ಯಾಜ್ಯ ನೀರು ಕಾಲಿಗೆ ತಾಗಿಕೊಂಡೆ ದೇವಸ್ಥಾನದ ಒಳ ಪ್ರವೇಶಿಸಿದ್ದಾರೆ.
ತ್ಯಾಜ್ಯ ನೀರು ತೆರೆದ ಸ್ಥಿತಿಯಲ್ಲಿ ರಸ್ತೆಯಲ್ಲಿ ಹರಡಿದ್ದು ಕೊರೊನಾ ಸಹಿತ ಡೆಂಗ್ಯೂ, ಮಲೇರಿಯಾ ಮಾರಕ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಕಟ್ಟಡದ ಕೆಳಬದಿಯಲ್ಲಿ ತ್ಯಾಜ್ಯನೀರಿನ ಪಿಟ್ ಭರ್ತಿಯಾಗಿ ಗಲೀಜುಮಯ ವಾತಾವರಣ ಸೃಷ್ಟಿಯಾಗಿದೆ.
ಕೂಡಲೇ ಮುಲ್ಕಿ ನಗರ ಪಂಚಾಯತ್ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘಟನೆ ಪುನರಾವರ್ತಿಸದಂತೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕಟ್ಟಡದ ಪರವಾನಿಗೆ ರದ್ದುಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
21/08/2021 09:51 am