ಮುಲ್ಕಿ: ಮುಲ್ಕಿ ಸಹಿತ ಅನೇಕ ಪ್ರವಾಸಿ ತಾಣಗಳ ಸಂಪರ್ಕಿಸುವ ಕೊಂಕಣ ರೈಲ್ವೆ ವಿಭಾಗದ ಮುಲ್ಕಿ ರೈಲ್ವೆ ನಿಲ್ದಾಣ ಅವ್ಯವಸ್ಥೆಗಳ ಆಗರವಾಗಿದೆ ಎಂದು ಕಾರು ಚಾಲಕ ಹುಸೇನ್ ಕಾರ್ನಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿ ಮುಲ್ಕಿ ರೈಲ್ವೆ ನಿಲ್ದಾಣ ಭಾರೀ ಮಳೆಗೆ ನಿಲ್ದಾಣದ ಶೀಟುಗಳಲ್ಲಿ ರಂದ್ರಗಳು ಉಂಟಾಗಿ ಅಲ್ಲಲ್ಲಿ ಸೋರುತ್ತಿದ್ದು ಪ್ರಯಾಣಿಕರು ಕೊಡೆಹಿಡಿದು ಕುಳಿತುಕೊಳ್ಳಬೇಕಾದ ಸಂದರ್ಭ ಬಂದಿದೆ.
ಮುಲ್ಕಿ ರೈಲ್ವೆ ನಿಲ್ದಾಣ ಮುಂಬೈ ಸಹಿತ ದೇಶ-ವಿದೇಶಗಳ ಹಾಗೂ ಧಾರ್ಮಿಕ ಹಾಗೂ ಶಿಕ್ಷಣ ಸಂಸ್ಥೆಗಳ ತವರೂರಾದ ಮೂಡಬಿದ್ರೆ, ಕಿನ್ನಿಗೋಳಿ, ಕಟೀಲು, ಬೆಳ್ತಂಗಡಿ, ಧರ್ಮಸ್ಥಳ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದ್ದು ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಗಳು ಹೊಂಡ ಗುಂಡಿಯಾಗಿ ಪ್ರಯಾಣ ದುಸ್ತರವಾಗಿದೆ ಎಂದು ಆರೋಪಿಸಿದ್ದಾರೆ.
ರಿಕ್ಷಾ ಚಾಲಕ ಉದಯ ಕೆ.ಎಸ್. ರಾವ್ ನಗರ ಮಾತನಾಡಿ ರೈಲ್ವೇ ನಿಲ್ದಾಣದ ಸಂಪರ್ಕ ರಸ್ತೆ ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು ಪ್ರಯಾಣಕ್ಕೆ ತೀವ್ರ ತೊಂದರೆ ಹಾಗೂ ದುಷ್ಕರ್ಮಿಗಳು ಅಲ್ಲಲ್ಲಿ ತ್ಯಾಜ್ಯ ಬಿಸಾಡುತ್ತಿರುವುದರಿಂದ ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ.
ರೈಲ್ವೆ ನಿಲ್ದಾಣದ ಎದುರು ಬದಿಯಲ್ಲಿ ಭಾರಿ ಮಳೆ ಬಂದರೆ ಕೆರೆಯಾಗಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ನಡೆದಾಡಲು ತೀವ್ರ ಸಂಕಷ್ಟ ಎದುರಾಗಿದೆ ಎಂದು ಹೇಳಿದ್ದಾರೆ.
ರೈಲ್ವೇ ನಿಲ್ದಾಣದಅವ್ಯವಸ್ಥೆ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ದುರಸ್ತಿಗಾಗಿ ಸಂಬಂಧಪಟ್ಟವರ ಗಮನ ಸೆಳೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ
ಕೂಡಲೇ ರೈಲ್ವೆ ಇಲಾಖೆ ಎಚ್ಚೆತ್ತು ರೈಲ್ವೆ ನಿಲ್ದಾಣವನ್ನು ದುರಸ್ತಿ ಪಡಿಸುವುದರ ಜೊತೆಗೆ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ನಾಗರಿಕರು ರಿಕ್ಷಾ ಚಾಲಕರು ಹಾಗೂ ಕಾರು ಚಾಲಕರು ಕೊಂಕಣ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.
Kshetra Samachara
07/08/2021 04:04 pm