ಪಡುಬಿದ್ರಿ: ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರು ಪರಿಸರದಲ್ಲಿ ಯುಪಿಸಿಎಲ್ ಕಂಪೆನಿಯ ಸುತ್ತಮುತ್ತಲ ಪ್ರದೇಶದಲ್ಲಿ ಕಲ್ಲಿದ್ದಲು ಮಿಶ್ರಿತ ನೀರನ್ನು ಹೊರ ಬಿಡಲಾಗುತ್ತದೆ ಎಂಬ ದೂರಿನ ಹಿನ್ನಲೆಯಲ್ಲಿ ಶನಿವಾರ ಉಡುಪಿ ಜಿಲ್ಲಾ ಪರಿಸರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಲ್ಲೂರು ಗ್ರಾಮ ಪಂಚಾಯಿತಿಯ ಉಳ್ಳೂರು ಪರಿಸರದ ಕರಿಯ ಶೆಟ್ಟಿ ಅವರ ಅವರ ಮನೆ ಸಮೀಪದ ತೋಡಿಗೆ ಕಲ್ಲಿದ್ದಲು ಮಿಶ್ರಿತ ಕಪ್ಪು ನೀರನ್ನು ಬಿಡಲಾಗುತ್ತದೆ. ಇದರಿಂದ ಕೃಷಿ ಚಟುವಟಿಕೆಗೆ ಹಾನಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು.
ಈ ಬಗ್ಗೆ ಗ್ರಾಮ ಪಂಚಾಯಿತಿ ಪರಿಸರ ಇಲಾಖೆಗೆ ದೂರು ನೀಡಿದ್ದು, ಈ ದೂರಿನ ಹಿನ್ನಲೆಯಲ್ಲಿ ಉಳ್ಳೂರಿಗೆ ಭೇಟಿ ನೀಡಿದ ಪರಿಸರ ಇಲಾಖೆಯ ಅಧಿಕಾರಿ ವಿಜಯ ಹೆಗ್ಡೆ ನೇತೃತ್ವದ ತಂಡ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಕಲೆಹಾಕಿತು.
ಈ ವೇಳೆ ಮಾತನಾಡಿದ ಸ್ಥಳೀಯರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಪರಿಸರ ಇಲಾಖೆಯ ಅಧಿಕಾರಿ ವಿಜಯ್ ಹೆಗ್ಡೆ ಕಂಪೆನಿಯ ಅಧಿಕಾರಿಗಳನ್ನು ಕೂಡಲೇ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದರು.
ಸ್ಥಳಕ್ಕೆ ಬಂದ ಅಧಿಕಾರಿಗಳಾದ ಚೆನ್ನಬಸವ ಹಾಗೂ ನರೇಂದ್ರ ಮಾಂಝಿ ಅವರೊಂದಿಗೆ ಕಲ್ಲಿದ್ದಲು ಮಿಶ್ರಿತ ನೀರು ಬಿಡುವ ಬಗ್ಗೆ ಸ್ಥಳೀಯರು ವಿಚಾರಿಸಿದಾಗ ಕಂಪೆನಿಯ ಒಳಗಿಂದ ಕಲ್ಲಿದ್ದಲು ಮಿಶ್ರಿತ ನೀರು ಹೊರಗೆ ಬಿಡುವುದನ್ನು ನಿರಾಕರಿಸಿದರು. ಇದರಿಂದ ಅಸಮಾಧಾನಗೊಂಡ ಸ್ಥಳೀಯರು ಕಳೆದ ರಾತ್ರಿ ಮಳೆ ಬಂದಾಗ ನೀರು ಬಿಡುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿರುವುದನ್ನು ಪ್ರದರ್ಶಿಸಿ ಅಸಮಾಧಾನ ವ್ಯಕ್ತಪಡಿಸಿದರು.
Kshetra Samachara
31/07/2021 08:10 pm