ಮಂಗಳೂರು: ಚಾರ್ಮಾಡಿ ಘಾಟಿ ರಸ್ತೆ ಕಾಮಗಾರಿ ಮುಗಿದರೂ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರಿಗೆ ಪತ್ರ ಬರೆದಿರುವ ಹರೀಶ್ ಕುಮಾರ್ ಅವರು, ''ಚಾರ್ಮಾಡಿ ಘಾಟಿ ರಸ್ತೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಈ ಹಿಂದೆ ರಸ್ತೆಯು ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಮತ್ತು ರಸ್ತೆ ಕುಸಿತದಿಂದ ಹಾನಿಗೊಳಗಾಗಿದ್ದ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಪ್ರಸ್ತುತ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ'' ಎಂದು ಕೋರಿದ್ದಾರೆ.
''ಪ್ರಸ್ತುತ ಈ ರಸ್ತೆಯು ನವೀಕರಣಗೊಂಡು ರಸ್ತೆಗಳು ಸುರಕ್ಷಿತವಾಗಿದ್ದರೂ ಭಾರೀ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರುವುದಿಲ್ಲ. ಆದ್ದರಿಂದ ಈ ಮಾರ್ಗವಾಗಿ ಬರುತ್ತಿದ್ದ ಹಣ್ಣು, ತರಕಾರಿ, ಆಹಾರ ಸಾಮಗ್ರಿಗಳು ಮತ್ತು ಜೀವನೋಪಯೋಗಿ ವಸ್ತುಗಳು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸರಬರಾಜು ಆಗದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಶ್ರೀಸಾಮಾನ್ಯರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ'' ಎಂದು ತಿಳಿಸಿದ್ದಾರೆ.
''10 ಟನ್ ಸಾಮರ್ಥ್ಯದ 6 ಚಕ್ರಗಳ ಸರಕು ಸಾಗಾಣೆ ವಾಹನಗಳಿಗೆ ಹಾಗೂ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಈ ಮಾರ್ಗದಲ್ಲಿ ಸಂಚಾರ ಮಾಡಲು ಬಹು ಜನರ ಬೇಡಿಕೆಯಂತೆ ಅವಕಾಶ ನೀಡಬೇಕೆಂದು'' ಎಂದು ಪತ್ರದಲ್ಲಿ ಹೇಳಿದ್ದಾರೆ.
Kshetra Samachara
02/02/2021 04:11 pm