ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಸೇತುವೆ ಕಾಮಗಾರಿ ಅವಾಂತರ: ಮೂವತ್ತಕ್ಕೂ ಹೆಚ್ಚು ಬಾವಿಗಳು ಕಲುಷಿತ!

ವಿಶೇಷ ವರದಿ: ರಹೀಂ ಉಜಿರೆ

ಉಡುಪಿ : ಉಡುಪಿ ನಗರ ಭಾಗದಲ್ಲೇ ನಡೆಯುತ್ತಿರುವ ಅವೈಜ್ಞಾನಿಕ ಸೇತುವೆ ಕಾಮಗಾರಿ ಪರಿಣಾಮ ಮೂವತ್ತಕ್ಕೂ ಹೆಚ್ಚು ಬಾವಿಗಳು ಕಲುಷಿತಗೊಂಡಿವೆ.ಈ ಭಾಗದ ಜನರು ಅಕ್ಷರಶಃ ಕಲ್ಮಷಯುಕ್ತ ನೀರನ್ನು ದಿನ ಬಳಕೆಗೆ ಉಪಯೋಗಿಸಬೇಕಾಗಿದೆ.ಇದರಿಂದ ಆಕ್ರೋಶಗೊಂಡಿರುವ ಮಠದಬೆಟ್ಟು ನಿವಾಸಿಗಳು ಸ್ಥಳೀತಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಉಡುಪಿ ನಗರಸಭೆ ವ್ಯಾಪ್ತಿಯ ಬನ್ನಂಜೆ ವಾರ್ಡಿನ ಮಠದಬೆಟ್ಟು ಎಂಬಲ್ಲಿ ಇಂದ್ರಾಣಿ ಹೊಳೆಗೆ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಿಸಲು ಒಂದು ಕೋಟಿ ರೂ. ಅನುದಾನ ಮಂಜೂರಾಗಿದೆ.ಅದರಂತೆ ಕಾಮಗಾರಿ ಪ್ರಾರಂಭಗೊಂಡಿದೆ.

ಅದಕ್ಕಾಗಿ ಹೊಳೆಗೆ ಮಣ್ಣು ಹಾಕಿ ನೀರನ್ನು ತಡೆ ಹಿಡಿಯಲಾಗಿದೆ. ಇನ್ನೊಂದೆಡೆ ನಗರಸಭೆಯಿಂದ ಡ್ರೈನೇಜ್ ನೀರನ್ನು ಇದೇ ಹೊಳೆಗೆ ಬಿಡಲಾಗುತ್ತಿದ್ದು , ಇದರಿಂದ ಸೇತುವೆ ನಿರ್ಮಾಣದ ಪ್ರದೇಶದಲ್ಲಿ ಡ್ರೈನೇಜ್ ನೀರು ಸಂಗ್ರಹಗೊಂಡಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹೊಳೆಯ ನೀರು ಹೆಚ್ಚಾಗಿ, ತ್ಯಾಜ್ಯ ನೀರು ಹೊಳೆಯನ್ನು ಸಂಪರ್ಕಿಸುವ ತೋಡುಗಳಲ್ಲಿ ಹರಿಯುತ್ತಿದೆ.

ಇದರ ಪರಿಣಾಮವಾಗಿ ಮಠದಬೆಟ್ಟು ಪರಿಸರದ ಸುಮಾರು 30ಕ್ಕೂ ಅಧಿಕ ಮನೆಗಳ ಬಾವಿಯ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿ ಮಲೀನಗೊಂಡಿವೆ.

ತ್ಯಾಜ್ಯ ನೀರಿನಿಂದಾಗಿ ಬಾವಿಯ ನೀರು ದಿನಬಳಕೆಗೆ ಅಯೋಗ್ಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗಬ್ಬು ನಾತ, ಸೊಳ್ಳೆ ಕಾಟ ಹೊಳೆಯಲ್ಲಿ ತ್ಯಾಜ್ಯ ನೀರು ಸಂಗ್ರಹದ ಪರಿಣಾಮ ಇಡೀ ಪರಿಸರ ಗಬ್ಬು ವಾಸನೆಯಿಂದ ಮಾಲಿನ್ಯಗೊಂಡಿದೆ. ಜನ ಮೂಗು ಮುಚ್ಚಿಕೊಂಡೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕಳೆದ ವಾರದಿಂದ ಸೊಳ್ಳೆ ಕಾಟ ವಿಪರೀತವಾಗಿದೆ.ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಳ್ಳದಿದ್ದರೆ ಕಳೆದ ಬಾರಿ ಯಂತೆ ಈ ಬಾರಿ ಕೂಡ ಕೃತಕ ನೆರೆ ಇಡೀ ಪರಿಸರವನ್ನೇ ಮುಳುಗಿಸಲಿದೆ.

ಬಾವಿಯ ನೀರು ಮಲೀನಗೊಂಡ ಪರಿಣಾಮ ಪರಿಸರದ ಹಲವರಿಗೆ ವಿವಿಧ ಕಾಯಿಲೆಗಳು ಕಂಡುಬಂದಿದೆ. ಮಕ್ಕಳು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸೊಳ್ಳೆಯಿಂದ ರಾತ್ರಿ ಮಲಗಲು ಕೂಡ ಆಗುತ್ತಿಲ್ಲ. ಒಂದೆರೆಡು ಮಳೆಯಲ್ಲಿ ಹೊಳೆಯ ನೀರಿನ ಮಟ್ಟ ಹೆಚ್ಚಾಗಿದ್ದು, ಮುಂದೆ ನಿರಂತರ ಮಳೆ ಬಂದರೆ ಈ ಮಲೀನ ನೀರು ಮನೆಗಳ ಒಳಗೆ ನುಗ್ಗುವ ಅಪಾಯವಿದೆ ಎಂದು ಸ್ಥಳೀಯ ಹೇಳಿದ್ದಾರೆ. ತಕ್ಷಣ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕಿದೆ.

Edited By :
PublicNext

PublicNext

25/04/2022 08:00 pm

Cinque Terre

46.23 K

Cinque Terre

1