ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ ಪರಿಸರದಲ್ಲಿ ಸುರಿದ ಭಾರಿ ಮಳೆಗೆ ನಂದಿನಿ ನದಿ ಉಕ್ಕಿ ಹರಿದು ಪಕ್ಷಿಕೆರೆ ಸಮೀಪದ ನದಿ ತೀರದ ಪ್ರದೇಶಗಳಾದ ಕೆಮ್ರಾಲ್, ಪಂಜ, ಬೈಲಗುತ್ತು ಪಂಜ ಬಾಕಿ ಮಾರ್ ಪ್ರದೇಶ 42 ಮನೆಗಳು, 4 ದೈವಸ್ಥಾನ, 5 ಬ್ರಹ್ಮ ಸ್ಥಾನ ಜಲಾವೃತಗೊಂಡಿದೆ.
ಶನಿವಾರ ರಾತ್ರಿ ಏಕಾಏಕಿ ಸುರಿದ ಭಾರಿ ಮಳೆಗೆ ಎಕರೆಗಟ್ಟಲೆ ಕೃಷಿ ಹಾನಿ ಸಂಭವಿಸಿದ್ದು12 ಕೃಷಿ ಪಂಪ್ ಶೆಡ್ ಕೂಡ ಮುಳುಗಡೆಯಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ಕೃಷಿಕ ಪಂಜ ಮಜಲ ಗುತ್ತು ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.
ಸಮೀಪದ ಉಲ್ಯ ಕುದುರು ಪ್ರದೇಶದಲ್ಲಿ 32 ಮನೆಗಳು ಜಲಾವೃತ ವಾಗಿದ್ದು ಸ್ಥಳೀಯರ ಸಹಕಾರದಿಂದ ದನ ಕರುಗಳನ್ನು ಹಾಗೂ 3 ಮನೆಯವರನ್ನು ಸ್ಥಳಾಂತರಗೊಳಿಸಲಾಗಿದ್ದು ಸಂಪರ್ಕ ರಸ್ತೆ ನೀರಿನಲ್ಲಿ ಮುಳುಗಿದೆ. ಹಾಗೂ ಕೃಷಿ ನಾಶ ಸಂಭವಿಸಿದೆ ಎಂದು ಉಲ್ಯ ಸುಂದರ ಪೂಜಾರಿ ತಿಳಿಸಿದ್ದಾರೆ.
ಪಂಜ ಜಾರಂದಾಯ ದೈವಸ್ಥಾನ ಜಲಾವೃತಗೊಂಡಿದ್ದು, ನೆರೆ ನೀರಿನಲ್ಲಿ ಬಂದ ಹಾವು ಮತ್ತಿತರ ಜಲಚರ ಪ್ರಾಣಿಗಳು ದೇವಸ್ಥಾನದ ಒಳಗಡೆ ಸೇರಿಕೊಂಡಿವೆ ಎಂದು ಕೃಷಿಕ ಸತೀಶ್ ಶೆಟ್ಟಿ ಬೈಲಗುತ್ತು ತಿಳಿಸಿದ್ದಾರೆ.
ಭಾರಿ ಮಳೆಗೆ ಪಂಜದಿಂದ ಸುರತ್ಕಲ್ ನ ಮಧ್ಯ ಕಡೆಗೆ ಸಂಪರ್ಕ ರಸ್ತೆ ಸುಮಾರು ಒಂದು ಕಿಲೋಮೀಟರ್ ಮುಳುಗಡೆಯಾಗಿದೆ.
Kshetra Samachara
10/07/2022 05:44 pm