ಬೈಂದೂರು: ತಾಲೂಕಿನ ಗೋಳಿಹೊಳೆ ಗ್ರಾಮಸ್ಥರು ರಸ್ತೆ ಡಾಂಬರೀಕರಣ ಮಾಡುವಂತೆ ಆಗ್ರಹಿಸಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತೊಂಡೆಯಿಂದ ಕಾಶಿಕೊಡ್ಲಿಗೆ ಹೋಗುವ ರಸ್ತೆ ಸಂಪೂರ್ಣ ಡಾಂಬರು ಅಥವಾ ಸರ್ವಋತು ರಸ್ತೆಯಾಗಿ ಮಾಡಬೇಕು ಎಂಬುದು ಈ ಗ್ರಾಮಸ್ಥರ ಮುಖ್ಯ ಬೇಡಿಕೆಯಾಗಿದೆ.
ತೊಂಡೆಯಿಂದ ಕಾಶಿಕೊಡ್ಲು ಪರಿಸರದಲ್ಲಿ 69 ಮನೆಗಳ ಸುಮಾರು 380 ನಾಗರಿಕರು ಗ್ರಾಪಂ ಸಂಪರ್ಕ ರಸ್ತೆಯನ್ನೇ ನಂಬಿಕೊಂಡಿದ್ದು, ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಗಿಂತಲೂ ಕಡೆಯಾಗುತ್ತದೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ ಪುಟಾಣಿಗಳು ಈ ರಸ್ತೆಯಲ್ಲಿ ಕಷ್ಟಪಡಬೇಕಾಗುತ್ತದೆ. ಇಲ್ಲಿಯ ಜನರ ಮುಖ್ಯ ಕಸಬು ಕೃಷಿ. ಕೃಷಿಗೆ ಬೇಕಾದ ಸೊಪ್ಪು, ಮನೆ ಪರಿಕರಗಳನ್ನು ಈ ರಸ್ತೆಯಲ್ಲೇ ತರಬೇಕಿದ್ದು, ರಸ್ತೆ ಸರಿಯಿಲ್ಲದೆ ಬಾಡಿಗೆ ವಾಹನ ಬಾರದೆ ತಲೆ ಹೊರೆಯಲ್ಲಿ ತರುವ ಸ್ಥಿತಿ ಇದೆ.
ಹೊಂಡದಮನೆ, ಹುಲ್ಕಲ್, ಕುರುವಾಣ, ಕೆಳಾಡಿ, ಮಳಾಳಿ, ಹುಣ್ಣಿಮಕ್ಕಿ ಕಾಶಿಕೊಡ್ಲು ಪರಿಸರಕ್ಕೆ ಗೋಳಿಹೊಳೆ ಬಳಿ ಬೈಂದೂರು ಕೊಲ್ಲೂರು ರಸ್ತೆಯಿಂದ ಸಂಪರ್ಕಿಸುವ ರಸ್ತೆ ಇದಾಗಿದೆ. ಇನ್ನು ತ್ರೀ ಫೇಸ್ ವಿದ್ಯುತ್ ಇಲ್ಲದೆ, ಕೃಷಿ ಪಂಪುಗಳು ನಿಷ್ಕ್ರಿಯವಾಗುತ್ತಿವೆ. ತಕ್ಷಣ ರಸ್ತೆ ಅಭಿವೃದ್ಧಿಪಡಿಸಿ ವಿದ್ಯುತ್ ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಜನರ ಬೇಡಿಕೆಗೆ ಸ್ಪಂದಿಸಿದ ಡಿ.ಸಿ ಕೂರ್ಮಾ ರಾವ್, ತೊಂಡ್ಲೆ ಪರಿಸರದ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸುವುದರೊಂದಿಗೆ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
Kshetra Samachara
28/07/2022 03:02 pm