ಮುಲ್ಕಿ: ಹಳೆಯಂಗಡಿ ಸಮೀಪದ ಚೇಳಾಯರು ಗ್ರಾಪಂ ವ್ಯಾಪ್ತಿಯ ಚೇಳಾಯರು ನಂದಿನಿ ನದಿ ಅಣೆಕಟ್ಟೆಗೆ ಹಲಗೆ ಅಳವಡಿಸಲು ಕೃಷಿಕರು ಕೆಲದಿನಗಳಿಂದ ಒತ್ತಾಯಿಸುತ್ತಿದ್ದರೂ ಇದುವರೆಗೂ ಅಧಿಕಾರಿಗಳು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲಗೆ ಅಳವಡಿಸಲು ವಿಳಂಬವಾದ ಕಾರಣದಿಂದ ನೂರಾರು ಎಕರೆ ಕೃಷಿ ಭೂಮಿ ಉಪ್ಪು ನೀರಿನಿಂದ ಆವೃತ್ತವಾಗಿದ್ದು ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ. ಚೇಳಾಯರು ನಂದಿನಿ ನದಿಗೆ ಖಂಡಿಗೆ ಬಳಿ ನೂತನ ಅಣೆಕಟ್ಟೆಗೆ ತಾಗಿಕೊಂಡು ಹಳೆ ಅಣೆಕಟ್ಟು ಕೂಡ ಇದ್ದು ಒಂದು ವೇಳೆ ನೂತನ ಅಣೆಕಟ್ಟೆಗೆ ಹಲಗೆ ಹಾಕಿದರೂ ಹಳೆ ಅಣೆಕಟ್ಟಿನ ಹಲಗೆಗಳು ಶಿಥಿಲಗೊಂಡಿರುವುದರಿಂದ ನೀರು ಸೋರಿಕೆಯಾಗುತ್ತಿದ್ದು ಎರಡೂ ದುರಸ್ತಿ ಆಗಬೇಕಾಗಿದೆ ಎಂದು ಸ್ಥಳೀಯ ಕೃಷಿಕ ಭೋಜ ಶೆಟ್ಟಿ ಹೇಳಿದ್ದಾರೆ.
ಈ ಪರಿಸರದ ಕೃಷಿಕರಲ್ಲಿ ಅಣೆಕಟ್ಟೆಗೆ ಹಾಕುವ ಹಲಗೆಯಲ್ಲಿ ದ್ವಂದ್ವ ನಿಲುವು ಇರುವುದರಿಂದ ಆಣೆಕಟ್ಟೆಗೆ ಹಲಗೆ ಹಾಕುವಲ್ಲಿ ವಿಳಂಬವಾಗಿದೆ ಎಂದು ಹೇಳಿದ್ದಾರೆ. ಒಂದು ಕಡೆ ಅಣೆಕಟ್ಟೆಗೆ ಹಲಗೆ ಹಾಕಿದರೆ ರೈತರು ಉಪ್ಪು ನೀರಿನಿಂದ ಕೃಷಿ ನಾಶ ಎಂದು ಹೇಳುತ್ತಿದ್ದರೆ ಇನ್ನೊಂದು ಬದಿ ಕೃಷಿಕರು ಕೃತಕ ನೆರೆ ಉಂಟಾಗಿ ಕೃಷಿ ನಾಶವಾಗುವ ಭೀತಿ ಇದೆ ಎಂದು ಆತಂಕಿತರಾಗಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳು ಎರಡು ದಿನದಲ್ಲಿ ಸೂಕ್ತ ನಿಲುವು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಭೋಜ ಶೆಟ್ಟಿ ಹೇಳಿದ್ದಾರೆ.
ಅಣೆಕಟ್ಟೆ ಬಳಿಯ ನಂದಿನಿ ನದಿಯಲ್ಲಿ ಹೂಳು ತುಂಬಿದ್ದು, ಅನೇಕ ಬಾರಿ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಇದುವರೆಗೂ ಹೂಳು ತೆಗೆಯುವ ಭರವಸೆ ಈಡೇರಿಲ್ಲ ಎಂದು ತಿಳಿಸಿದ್ದಾರೆ. ಅಣೆಕಟ್ಟೆ ಬದಿ ಮನೆಗಳಿದ್ದು ತಡೆಗೋಡೆ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದು, ಕೂಡಲೇ ಆಣೆಕಟ್ಟೆಗೆ ಹಲಗೆ ಹಾಕುವುದರ ಜೊತೆಗೆ ಬಳಿಯ ಹಳೆ ವೆಂಟೆಡ್ ಡ್ಯಾಮ್ ಗೇಟ್ ವಾಲ್ವ್ ದುರಸ್ತಿ ಪಡಿಸಿದರೆ ಮಾತ್ರ ಉಪ್ಪು ನೀರಿನ ಹಾವಳಿ ಸರಿಪಡಿಸಬಹುದು ಎಂದರು. ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗೆ ಮನವಿ ನೀಡಲು ನಿರ್ಧರಿಸಿದ್ದಾರೆ.
Kshetra Samachara
10/11/2020 06:49 pm