ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಗ್ರಾಪಂ "ನಮ್ಮ ಗ್ರಾಮ ನಮ್ಮ ಯೋಜನೆ" ತಯಾರಿ ಬಗ್ಗೆ ಗ್ರಾಮ ಸಭೆ ಕಿಲ್ಪಾಡಿ ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ಮಾತನಾಡಿ, ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಮುಂದಿನ ಐದು ವರ್ಷಗಳ ಕ್ರಿಯಾಯೋಜನೆ ಮಾಡಲು ಎಲ್ಲರ ಸಹಕಾರ ಬೇಕು ಎಂದು ವಿನಂತಿಸಿದರು. ಕಂದಾಯ ಇಲಾಖೆ ಅಧಿಕಾರಿ ಸುನಿಲ್ ಕುಮಾರ್ ಮಾತನಾಡಿ, ಪಂಚಾಯತ್ ಚುನಾವಣೆಗೆ ಸದ್ಯದಲ್ಲಿಯೇ ಅಧಿಸೂಚನೆ ಜಾರಿಯಾಗಲಿದ್ದು, ನ. 18ರಿಂದ ಡಿಸೆಂಬರ್ 17 ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ ಎಂದರು.
ಕಿಲ್ಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತ್ ಕೆರೆಕಾಡು ಹಾಗೂ ಸದಸ್ಯ ನಾಗರಾಜ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ ಸರಕಾರದ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಹಾಗೂ ಹಕ್ಕುಪತ್ರ ವಿಲೇವಾರಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಪಂಚಾಯತ್ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಕಂದಾಯ ಅಧಿಕಾರಿ ಸುನಿಲ್ ಕುಮಾರ್ ಉತ್ತರಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಕಿಲ್ಪಾಡಿ ಗ್ರಾಪಂ ವ್ಯಾಪ್ತಿಯ ಕೆಂಚನಕೆರೆ ಅಂಗರಗುಡ್ಡೆ ಹೆದ್ದಾರಿ ಬದಿ ದುಷ್ಕರ್ಮಿಗಳು ಅಕ್ರಮವಾಗಿ ತ್ಯಾಜ್ಯ ಎಸೆಯುತ್ತಿದ್ದು ಏನು ಕ್ರಮಕೈಗೊಂಡಿದ್ದೀರಿ, ಪಂ. ವ್ಯಾಪ್ತಿಯ ಕೆಎಸ್ ರಾವ್ ನಗರದಲ್ಲಿ ತ್ಯಾಜ್ಯಗುಂಡಿ ನಿರ್ಮಿಸುವ ಬಗ್ಗೆ ಏನಾಯಿತು? ಎಂದು ನಾಗರಾಜ ಕುಲಾಲ್ ಪ್ರಶ್ನಿಸಿದರು. ಆಗ ಪಿಡಿಒ ಹರಿಶ್ಚಂದ್ರ ಉತ್ತರಿಸಿ, ಲಿಂಗಪ್ಪಯ್ಯ ಕಾಡಿನಲ್ಲಿ ತ್ಯಾಜ್ಯ ಗುಂಡಿಗೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಅರ್ಧದಲ್ಲಿ ನಿಂತಿದೆ. ಈ ಬಗ್ಗೆ ಮುಲ್ಕಿ ತಹಶೀಲ್ದಾರ್ ಗಮನಕ್ಕೂ ತರಲಾಗಿದೆ. ಅಂಗರಗುಡ್ಡೆ ಕೆಂಚನಕೆರೆ ಬಳಿ ತ್ಯಾಜ್ಯ ಎಸೆಯುವವರ ಬಗ್ಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಿಲ್ಪಾಡಿ ಪಂ. ವ್ಯಾಪ್ತಿಯ ಹೆದ್ದಾರಿ ಅಪಾಯಕಾರಿ ತಿರುವಿನಲ್ಲಿ ಹಾಗೂ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಭಾರಿ ಗಾತ್ರದ ಹುಲ್ಲು ಬೆಳೆದಿದ್ದು ಕಟಾವ್ ಮಾಡಬೇಕೆಂದು ಮಾಜಿ ಪಂ. ಅಧ್ಯಕ್ಷ ಶ್ರೀಕಾಂತ್ ಕೆರೆಕಾಡು ಆಗ್ರಹಿಸಿದರು. ಆರೋಗ್ಯ ಇಲಾಖೆಯ ಸುಮನಾ ಮಾತನಾಡಿ, ಕೊರೊನಾ ಸುರಕ್ಷತೆ ಬಗ್ಗೆ ಎಲ್ಲರೂ ಗಮನಹರಿಸಿ ಕೊಳ್ಳಿ. ಕೋವಿಡ್ 19 ಪರೀಕ್ಷೆ ಮಾಡಿಸಿಕೊಳ್ಳ ದವರು ಸುರಕ್ಷತೆ ದೃಷ್ಟಿಯಿಂದ ಮಾಡಿಸಿಕೊಳ್ಳಬೇಕೆಂದು ಹೇಳಿದರು. ಅರಣ್ಯ ಇಲಾಖೆಯ ರಾಜು, ತೋಟಗಾರಿಕೆ ಇಲಾಖೆಯ ಷಣ್ಮುಖ, ಮಹಿಳಾ ಮತ್ತು ಮಕ್ಕಳ ಇಲಾಖೆ ಪರವಾಗಿ ಅಂಗನವಾಡಿ ಕಾರ್ಯಕರ್ತೆ ಜಲಜಾ, ತಾಲೂಕು ಸಂಯೋಜಕಿ ಶ್ವೇತಾ, ಇಲಾಖೆಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿ ಪಂ. ಆಡಳಿತ ಅಧಿಕಾರಿ ರಾಜಲಕ್ಷ್ಮಿ ಕೆ. ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು. ಪಂಚಾಯತ್ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ದರು.
Kshetra Samachara
03/11/2020 03:22 pm