ಕುಂದಾಪುರ: ಕೊಲ್ಲೂರು- ಹೆಮ್ಮಾಡಿ - ಕುಂದಾಪುರ ಮತ್ತು ಕೆರಾಡಿ - ಮಾರಣಕಟ್ಟೆ-ಕುಂದಾಪುರ ಮತ್ತು ಕೆರಾಡಿ-ಬೆಳ್ಳಾಲ-ಕುಂದಾಪುರ ಮಾರ್ಗದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಇವತ್ತು ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರಿನಲ್ಲಿ ಇದುವರೆಗೂ ಕೂಡ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲ. ಇದರಿಂದ ಬಡ ವಿದ್ಯಾರ್ಥಿಗಳಾದ ನಮಗೆ ತುಂಬ ಸಮಸ್ಯೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಕುಂದಾಪುರದಲ್ಲಿ ಸುರಿಯುವ ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಕುಂದಾಪುರಕ್ಕೆ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಹೋಗುತ್ತಿದ್ದೇವೆ.ನಮಗೆ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲ. ಕೊಲ್ಲೂರಿಗೆ ಯಾವುದೇ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲದಿರುವುದು ಅತ್ಯಂತ ದುಃಖದ ವಿಷಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕೆರಾಡಿ - ಮಾರಣಕಟ್ಟೆ - ಕುಂದಾಪುರ ಮಾರ್ಗದಲ್ಲಿ 500 ಮತ್ತು ಕೆರಾಡಿ-ಬೆಳ್ಳಾಲ-ಕುಂದಾಪುರ ಮಾರ್ಗದಲ್ಲಿ 400 ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಈಗಾಗಲೇ ಈ ಮಾರ್ಗದಲ್ಲಿ ಪರವಾನಗಿ ಇದ್ದರೂ ಯಾವುದೇ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಇದುವರೆಗೂ ಸಂಚರಿಸುತ್ತಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ವಾರಗಳ ಗಡುವು ನೀಡುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ
Kshetra Samachara
11/06/2022 06:25 pm