ವರದಿ: ರಹೀಂ ಉಜಿರೆ
ಶಿರ್ವ : ಶಿರ್ವದಲ್ಲೊಂದು ಹೈಟೆಕ್ ಅಂಗನವಾಡಿ ತಲೆ ಎತ್ತಿ ನಿಂತಿದೆ. ಬರೋಬ್ಬರಿ 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಹೈಟೆಕ್ ಸ್ಪರ್ಶವಿರುವ ಜಿಲ್ಲೆಯ ಮೊದಲ ಹವಾನಿಯಂತ್ರಿತ ಅಂಗನವಾಡಿ ಕೇಂದ್ರ ಎಂಬ ಹೆಗ್ಗಳಿಕೆ ಇದರದ್ದು.
ದಿ| ಅಚ್ಯುತ ಕಾಮತ್ ಅವರು ಗ್ರಾ.ಪಂ.ಗೆ ದಾನವಾಗಿ ನೀಡಿದ್ದ 6 ಸೆಂಟ್ಸ್ ಜಾಗದಲ್ಲಿ ಇದು ತಲೆ ಎತ್ತಿ ನಿಂತಿದೆ. ದುಸ್ಥಿತಿಯಲ್ಲಿದ್ದ 35 ವರ್ಷ ಹಳೆಯ ಕಟ್ಟಡದಲ್ಲಿ ಈ ಅಂಗನವಾಡಿ ಸಿದ್ಧಗೊಂಡಿದೆ. ಅಪಾಯಕಾರಿ ಸ್ಥಿತಿಯಲ್ಲಿದ್ದ ಅಂಗನವಾಡಿಗೆ ಸಂಪೂರ್ಣ ಹೊಸ ರೂಪ ನೀಡಲಾಗಿದ್ದು ಯಾವುದೇ ಪ್ಲೇ ಸ್ಕೂಲ್ ಗಿಂತ ಉತ್ತಮ ದರ್ಜೆಯಲ್ಲಿದೆ.
ಅಂಗನವಾಡಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 16.5 ಲ. ರೂ.ಗಳಲ್ಲಿ ಕಟ್ಟಡ ನಿರ್ಮಿಸಿಕೊಟ್ಟಿದ್ದರೆ, ದೇಶ ವಿದೇಶಗಳಲ್ಲಿ ನೆಲೆಸಿರುವ ಊರವರು, ಊರ ಸಂಘಸಂಸ್ಥೆಗಳು ಹಾಗೂ ದಾನಿಗಳ ಸಹಕಾರದಿಂದ ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್ ಸುಮಾರು 4 ಲ.ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರಕ್ಕೆ ಹೈಟೆಕ್ ಸ್ಪರ್ಶ ನೀಡಿದ್ದಾರೆ.
ಕೇಂದ್ರದಲ್ಲಿ 30 ಮಕ್ಕಳಿದ್ದು, ಅಂಗನವಾಡಿ ಸುತ್ತಲೂ ಆವರಣ ಗೋಡೆ, ಕೊಠಡಿಗೆ ಹವಾ ನಿಯಂತ್ರಿತ ವ್ಯವಸ್ಥೆ, ಗೋಡೆ ಬರಹ, ಕಾರ್ಟೂನ್ ಚಿತ್ರಗಳು, ಕೇಬಲ್ ಟಿವಿ ಸಂಪರ್ಕದೊಂದಿಗೆ ಪುಟಾಣಿಗಳಿಗೆ ಕಾರ್ಟೂನ್ ನೆಟ್ವರ್ಕ್ ನೋಡುವ ಅವಕಾಶ ಕಲ್ಪಿಸಲಾಗಿದೆ. ಪುಟಾಣಿಗಳಿಗಾಗಿ ನೆರಳಿರುವ ಪ್ರತ್ಯೇಕ ಜಾರುಬಂಡಿ, ಸುಮಾರು 800 ಚ.ಅಡಿ ಚಪ್ಪರ, 1000 ಚ.ಅಡಿಯ ಇಂಟರ್ಲಾಕ್, ಮಕ್ಕಳ ಹೆತ್ತವರಿಗಾಗಿ ವಿರಮಿಸಲು ಕಾಂಕ್ರೀಟ್ ಬೆಂಚುಗಳು, ಎರಡು ಶೌಚಾಲಯ, 24 ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ವಾಟರ್ ಪ್ಯೂರಿಫೈಯರ್, ಸೋಫಾ, ಚಪ್ಪಲ್ ಸ್ಟಾಂಡ್, ಬ್ಯಾಗ್ ಸ್ಟಾಂಡ್, ಮಕ್ಕಳಿಗಾಗಿ ಸಣ್ಣ ಕುರ್ಚಿಗಳು , ಸಮವಸ್ತ್ರ, ಟೇಬಲ್ ಮತ್ತು ಕುರ್ಚಿ ಹಾಗೂ ಆವರಣದಲ್ಲಿ ಸೋಲಾರ್ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ.
PublicNext
03/06/2022 08:00 pm