ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಕೊಠಡಿ ಕೊರತೆ; ಶಾಲಾ ಹೊರಾಂಗಣವೇ ಪಾಠದಂಗಳ!

ಮೂಡುಬಿದಿರೆ: ಅಳಿಯೂರಿನ ಸರ್ಕಾರಿ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 300 ದಾಟಿದರೂ, ಕೊಠಡಿ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಬಿಸಿಲು, ಗಾಳಿ- ಮಳೆ ಲೆಕ್ಕಿಸದೆ ಅಂಗಳದಲ್ಲೇ ಕೂತು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ!

ಅಳಿಯೂರು ದ.ಕ. ಜಿಪಂ ಅನುದಾನಿತ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಈ ಪರಿಸ್ಥಿತಿ ಎದುರಾಗಿದೆ. ಶಾಲೆಯಲ್ಲಿ ಒಟ್ಟು 325 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಎರಡು ತರಗತಿಗಳು ಶಾಲೆಯ ಒಳಾಂಗಣದಿಂದ ಹೊರಗೆ ಬಿದ್ದಿದೆ.

ಕೊಠಡಿಗಳ ಕೊರತೆ ಪ್ರಮುಖ ಕಾರಣವಾಗಿದ್ದು, ಶಾಲೆ ಹೊರಾಂಗಣದಲ್ಲಿ ತಾತ್ಕಾಲಿಕ ತಗಡುಶೀಟ್ ಅಳವಡಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ತಗಡುಶೀಟ್‍ನಿಂದಾಗಿ ಬಿಸಿಲಿನ ಬೇಗೆ ಹೆಚ್ಚಾದರೆ, ಗಾಳಿ- ಮಳೆಯಲ್ಲಿ ತಗಡು ಅಪ್ಪಳಿಸಿ ವಿದ್ಯಾರ್ಥಿಗಳಿಗೆ ಹಾನಿಯಾಗುವ ಸಂಭವವೂ ಇದೆ.

ಎಸ್‍ಡಿಎಂಸಿ ಅಧ್ಯಕ್ಷ ರವೀಂದ್ರ ಮಾತೃಶ್ರೀ, ಹಳೆ ವಿದ್ಯಾರ್ಥಿ ಸಂಘದ ಪ್ರಮುಖರಾದ ಲಕ್ಷ್ಮಣ್ ಕೋಟ್ಯಾನ್, ಗಣೇಶ್ ಬಿ.ಅಳಿಯೂರು, ಪೋಷಕ ಪ್ರಮುಖರಾದ ವಿಶ್ವನಾಥ ಕೋಟ್ಯಾನ್, ಪದ್ಮನಾಭ ಕೋಟ್ಯಾನ್ ಸಹಿತ ಪೋಷಕರು, ಗ್ರಾಮಸ್ಥರು ಶಾಲೆಯ ಸಮಸ್ಯೆ ಬಗ್ಗೆ ಹಲವು ಬಾರಿ ಶಿಕ್ಷಣ ಇಲಾಖೆಯ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜವಾಗಿಲ್ಲ.

"ಅಳಿಯೂರು ಶಾಲೆಗೆ ತರಗತಿ ಕೊಠಡಿ ಮಂಜೂರಾಗಿದೆ. ತಾಂತ್ರಿಕ ಕಾರಣಗಳಿಂದ ಟೆಂಡರ್ ರದ್ದಾಗಿದೆ. ಈ ಬಗ್ಗೆ ಅಗತ್ಯ ಕ್ರಮ ವಹಿಸಿ ಆದಷ್ಟು ಬೇಗ ಕೊಠಡಿ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದೇವೆ. ಸದ್ಯ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ರೊಟೇಶನ್ ಮಾದರಿಯಲ್ಲಿ ತರಗತಿ ನಡೆಸಲು ಸೂಚಿಸಿದ್ದೇನೆ"

- ದೇವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮೂಡುಬಿದಿರೆ

Edited By : Shivu K
Kshetra Samachara

Kshetra Samachara

20/11/2021 12:17 pm

Cinque Terre

11.75 K

Cinque Terre

0