ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಇತ್ತೀಚೆಗೆ ಎಲೆಕ್ಟ್ರಿಕ್ ,ಗ್ಯಾಸ್ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಇದು ಉತ್ತಮ ಬೆಳವಣಿಗೆ ಕೂಡ. ಆದರೆ ಗ್ಯಾಸ್ ಗಾಡಿಗಳನ್ನು ಬಿಡುವ ಕಂಪೆನಿಯವರು ಮತ್ತು ಸರಕಾರ ಸಕಾಲಕ್ಕೆ ಗ್ಯಾಸ್ ಪೂರೈಕೆಯನ್ನೂ ಮಾಡಬೇಕಲ್ಲವೆ? ಆದರೆ ಉಡುಪಿಯಂತಹ ದೊಡ್ಡ ನಗರದಲ್ಲಿ ಗ್ಯಾಸ್ ಪೂರೈಕೆ ಸಮರ್ಪಕವಾಗಿ ಆಗದೆ ,ಆಟೋ ಚಾಲಕರು ಸಮಸ್ಯೆ ಅನುಭವಿಸುವಂತಾಗಿದೆ.
ಉಡುಪಿಯಲ್ಲಿ CNG ಬಂಕ್ ಇರುವುದು ಒಂದೇ ಕಡೆ. ನಗರದ ಗುಂಡಿಬೈಲಿನಲ್ಲಿರುವ CNG ಕೇಂದ್ರದಲ್ಲಿ ನೂರಾರು ಆಟೋಗಳು ಪ್ರತಿದಿನ ನಿಂತಿರುತ್ತವೆ. ಮೂರ್ನಾಲ್ಕು ಲಕ್ಷ ರೂ. ಕೊಟ್ಟು ಸಾಲ ಮಾಡಿ ಆಟೋ ಖರೀದಿಸಿದವರ ಸಮಸ್ಯೆ ಯಾರಿಗೂ ಬೇಡ. ಇರುವ ಒಂದೇ ಕೇಂದ್ರದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ. ಉಡುಪಿ ಬಿಟ್ಟರೆ ದೂರದ ಪಡುಬಿದ್ರೆಗೆ ಹೋಗಬೇಕು. ಅಥವಾ ಕೋಟೇಶ್ವರಕ್ಕೆ ಹೋಗಬೇಕು. ಒಮ್ಮೆ ಗ್ಯಾಸ್ ತುಂಬಿಸಿಕೊಳ್ಳಲು ಆಟೋಗಳು ಕನಿಷ್ಟ ಅರ್ಧ ದಿನ ಕಾಯಬೇಕು. ಒಂದು ಕಡೆ ಬಾಡಿಗೆ ಮಾಡಲೂ ಆಗುವುದಿಲ್ಲ.ಇನ್ನೊಂದು ಕಡೆ ಸರದಿ ತಪ್ಪಿದರೆ ಎಂಬ ಆತಂಕ. ಬಾಡಿಗೆ ಮಾಡದಿದ್ದರೆ ಸಾಲದ ಕಂತು ಕಟ್ಟುವುದು ಹೇಗೆ? ಒಂದು ದಿನವಾದರೆ ಓಕೆ ,ಪ್ರತಿನಿತ್ಯ ಇದೇ ಗೋಳು ಅಂತಾರೆ ಚಾಲಕರು.
ಇತ್ತೀಚೆಗೆ ಉಡುಪಿಯಲ್ಲಿ ಗ್ಯಾಸ್ ( CNG) ಆಟೋಗಳು ತುಂಬಿವೆ. ಪೆಟ್ರೋಲ್ ಡೀಸೆಲ್ ದರ ದುಬಾರಿಯಾದ ಕಾರಣ ಬಹುತೇಕರು ಗ್ಯಾಸ್ ಆಟೋಗಳಿಗೆ ಮಾರು ಹೋಗುತ್ತಿದ್ದಾರೆ.ಆದರೆ ಗ್ಯಾಸ್ ಮಾತ್ರ ಸೂಕ್ತ ಸಮಯದಲ್ಲಿ ,ಸೂಕ್ತ ಸ್ಥಳದಲ್ಲಿ ಸಿಗುತ್ತಿಲ್ಲ ಎಂದು ಆಟೋ ಚಾಲಕರು ನೋವು ತೋಡಿಕೊಂಡಿದ್ದಾರೆ.
CNG ವಾಹನಗಳು ಪರಿಸರ ಸ್ನೇಹಿ ಎಂಬ ಕಾರಣಕ್ಕೆ ಸರಕಾರ ಪ್ರೋತ್ಸಾಹವನ್ನೇನೋ ನೀಡುತ್ತಿದೆ. ಆದರೆ ಆ ವಾಹನಗಳಿಗೆ ಬೇಕಾದ ಗ್ಯಾಸ್ ಅಥವಾ ಇಂಧನವನ್ನೂ ಸೂಕ್ತ ಕಾಲಕ್ಕೆ ಪೂರೈಸಬೇಕಾದ ಜವಾಬ್ದಾರಿಯೂ ಸರಕಾರ ಅಥವಾ ವಾಹನ ಡೀಲರ್ ಗಳ ಮೇಲಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಿದೆ.
PublicNext
15/09/2022 06:26 pm