ವರದಿ: ರಹೀಂ ಉಜಿರೆ
ಉಡುಪಿ: ಕಾಲಕಾಲಕ್ಕೆ ಜನರ ಆಹಾರದ ಅಗತ್ಯಗಳನ್ನು ಪೂರೈಸುವ ಸ್ವಿಗ್ಗಿ ಡೆಲಿವರಿ ಬಾಯ್ಸ್ ಸಂಕಷ್ಟದಲ್ಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಹೂಡಿದ್ದಾರೆ. ಉಡುಪಿ ಮಣಿಪಾಲದ 150 ಕ್ಕೂ ಅಧಿಕ ಯುವಕರು ಅಕ್ಷರಶಃ ನಿರುದ್ಯೋಗಿಗಳಾಗಿದ್ದಾರೆ.
ಮಣಿಪಾಲದಂತಹ ವಿದ್ಯಾನಗರಿಯಲ್ಲಿ ಯೂನಿವರ್ಸಿಟಿ ಇದೆ. ಆಸ್ಪತ್ರೆಗಳಿವೆ.ಇವರಿಗೆಲ್ಲ ಕಾಲಕಾಲಕ್ಕೆ ಆಹಾರ ಪೂರೈಸುವವರು ಸ್ವಿಗ್ಗಿ ಡೆಲಿವರಿ ಬಾಯ್ಸ್. ಆದರೆ ಒಂದೂವರೆ ತಿಂಗಳ ಹಿಂದೆ ಬಂದ ಮ್ಯಾನೇಜರ್ ಕಿರುಕುಳದಿಂದ ಇವರೆಲ್ಲ ಬೇಸತ್ತಿದ್ದಾರೆ. ತಿಂಗಳಿಗೆ ಪರಿಶ್ರಮ ಪಟ್ಡು 25- 30 ಸಾವಿರದವರೆಗೂ ದುಡಿಯುತ್ತಿದ್ದ ಇವರ ಅನ್ನದ ಬಟ್ಟಲಿಗೆ ಈಗ ಸಂಚಕಾರ ಬಂದಿದೆ. ಡೆಲಿವರಿ ಬಾಯ್ ಗಳ ಐಡಿ ಬ್ಲಾಕ್ ಮಾಡುವುದು ಮತ್ತು ಪೆನಾಲ್ಟಿ ಹಾಕುವ ಮೂಲಕ ಹೊಸ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದಾರೆ ಎಂಬುದು ಇವರ ಆರೋಪ. ಕೆಲಸ ಮಾಡಿದರೂ ಒಂದಿಲ್ಲೊಂದು ನೆಪ ಮುಂದಿಟ್ಟು ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಕಳೆದ ಒಂದು ತಿಂಗಳಿನಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ. ನಮ್ಮ ಸಮಸ್ಯೆಗೆ ಪರಿಹಾರ ಬೇಕು ಎಂದು ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.
ಸದ್ಯ ಮಣಿಪಾಲ ಮತ್ತು ಉಡುಪಿಯಲ್ಲಿ ಇನ್ನೂರರಷ್ಟು ಸ್ವಿಗ್ಗಿ ಡೆಲಿವರಿ ಬಾಯ್ಸ್ ಇದ್ದಾರೆ. ಹಗಲು ರಾತ್ರಿ ಎನ್ನದೇ ದುಡಿಯುವ ಇವರ ಪೈಕಿ 150 ಕ್ಕೂ ಹೆಚ್ಚು ಯುವಕರು ಕೆಲಸವನ್ನು ಬಾಯ್ಕಾಟ್ ಮಾಡಿದ್ದಾರೆ. ತಮ್ಮ ಮ್ಯಾನೇಜರ್ ಕಿರುಕುಳ ನಿಲ್ಲುವವರೆಗೆ ನಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇವರು ತಮ್ಮ ಸಮಸ್ಯೆಗಳನ್ನು ಶಾಸಕ ರಘುಪತಿ ಭಟ್ ಜೊತೆ ಹೇಳಿಕೊಂಡಿದ್ದಾರೆ. ರಘುಪತಿ ಭಟ್ ಪರಿಹಾರ ಸೂಚಿಸುವ ಭರವಸೆಯನ್ನೂ ನೀಡಿದ್ದಾರೆ. ಇವತ್ತು ಅಥವಾ ನಾಳೆ ಶಾಸಕರನ್ನು ಇವರು ಭೇಟಿಯಾಗಲಿದ್ದು ಸಮಸ್ಯೆಗೆ ಪರಿಹಾರ ಸಿಗುತ್ತೋ ಕಾದು ನೋಡಬೇಕಿದೆ.
Kshetra Samachara
02/09/2022 04:04 pm