ಸುಳ್ಯ: ಸ್ವಿಜರ್ಲ್ಯಾಂಡಿನ ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಲುಲು ಗ್ರೂಪ್ ರಾಜ್ಯದಲ್ಲಿ ನಾಲ್ಕು ಶಾಪಿಂಗ್ ಮಾಲ್, ಹಾಗೂ ಹತ್ತು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲು ಕರ್ನಾಟಕ ಸರ್ಕಾರದೊಂದಿಗೆ ಒಡಂಬಡಿಕೆಯಲ್ಲಿ ಸಹಿ ಹಾಕಿದ್ದು, ಆದರೆ ನಂತರದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಟ್ವಿಟರ್ ಮತ್ತು ಫೇಸ್ ಬುಕ್ ಖಾತೆಯಲ್ಲಿ ಈ ಒಡಂಬಡಿಕೆಗೆ ಕಾರಣಕರ್ತರಾದ ಸಂಸ್ಥೆಯ ಮಾಲಕ ಯೂಸುಫ್ ಅಲಿ ಅವರ ಹೆಸರನ್ನು ಪ್ರಸ್ತಾಪಿಸದೆ, ಲುಲು ಗ್ರೂಪ್ ಇಂಟರ್ನ್ಯಾಷನಲ್ ಇದರ ನಿರ್ದೇಶಕ ಅನಂತ್ ರಾಮ್‌ರವರ ಹೆಸರನ್ನು ಮಾತ್ರ ಸೂಚಿಸಿದ್ದು, ಯೂಸುಫ್ ಅಲಿ ಅವರನ್ನು ಕಡೆಗಣಿಸಿರುವುದು ಖಂಡನೀಯ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಟಿ ಎಂ ಶಹೀದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಒಂದು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರಕಾರವು ವಿವಿಧ ಮತೀಯ ಗಲಭೆಗಳನ್ನು ಸೃಷ್ಟಿಸಿ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುತ್ತಿದೆ. ಹಿಜಾಬ್ ಪ್ರಕರಣ,ಅಜಾನ್, ಜಟಕಾ ಕಟ್, ಹಿಂದೂ ಧಾರ್ಮಿಕ ಕೇಂದ್ರಗಳ ಜಾತ್ರೆ ಸಮಾರಂಭಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರದ ತಡೆ ಹೀಗೆ ಮುಂತಾದ ವಿಷಯಗಳನ್ನು ಆಧರಿಸಿ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸಿದೆ. ಇದೀಗ ಅದಕ್ಕೆ ಪೂರಕವಾಗುವಂತೆ ಯೂಸುಫ್ ಅಲಿ ರವರು ಮುಸಲ್ಮಾನರು ಎಂಬ ಉದ್ದೇಶವನ್ನು ಇಟ್ಟು ಈ ಒಡಂಬಡಿಕೆಯಲ್ಲಿ ಅವರ ಅಪಾರ ಕಾಳಜಿಯನ್ನು, ಮತ್ತು ಸಮಾಜ ಸೇವೆಯನ್ನು, ಮರೆತು ಅವರಿಗೆ ಮಾಡಿದ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಹೊರದೇಶಗಳಲ್ಲಿ ಭಾರತದ ಪ್ರಜೆಗಳು ಜೈಲಿನಲ್ಲಿ ಮುಂತಾದ ಕಡೆಗಳಲ್ಲಿ ಸಂಕಷ್ಟಕ್ಕೀಡಾದ ಜಾತಿ ಮತ ನೋಡದೆ ಅವರನ್ನು ರಕ್ಷಣೆ ಮಾಡುವ ಕೆಲಸಕ್ಕೆ ಯೂಸುಫ್ ಅಲಿ ಮುಂದಾಗಿದ್ದರು. ದೇಶದಲ್ಲಿ ನಾನಾ ರಾಜ್ಯಗಳಲ್ಲಿ ತಮ್ಮ ಸಂಸ್ಥೆಯನ್ನು ಬೆಳೆಸಿ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಜಾತಿ ಮತ ನೋಡದೆ ನೀಡುವ ಮಹತ್ಕಾರ್ಯವನ್ನು ಇವರು ಮಾಡಿದ್ದಾರೆ. ಅಂತಹ ವ್ಯಕ್ತಿಯನ್ನು ಕಡೆಗಣಿಸಿರುವುದು ನಿಜವಾಗ್ಲೂ ಖಂಡನೀಯ ಎಂದು ಅವರು ಹೇಳಿದರು. ರಾಜಕೀಯ ದುರುದ್ದೇಶ ಇಟ್ಟುಕೊಂಡು ಬಿಜೆಪಿ ಸರಕಾರದವರು ಇದನ್ನು ಮಾಡುತ್ತಿದ್ದಾರೆ. ಇದು ಜಾತ್ಯತೀತ ದೇಶಕ್ಕೆ ಮಾರಕ ಎಂದು ಹೇಳಿದರು.
Kshetra Samachara
25/05/2022 10:28 pm