ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಗೇರುಸಿಪ್ಪೆ ಸಂಸ್ಕರಣಾ ಘಟಕ ಸ್ಥಾಪನೆಗೆ ಗ್ರಾಮಸ್ಥರ ತೀವ್ರ ವಿರೋಧ

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆ ಜನನಿಬಿಡ ಪ್ರದೇಶದಲ್ಲಿ ಇರುವ KIADB ನಿವೇಶನದಲ್ಲಿ ಜಾನ್ ಡಿಸಿಲ್ವಾ ಅವರು ಪರಿಸರಕ್ಕೆ ಮಾರಕವಾಗುವ ಗೇರು ಸಿಪ್ಪೆ ಸಂಸ್ಕರಣ ಘಟಕ ಸ್ಥಾಪನೆಗೆ ಮುಂದಾಗಿದ್ದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಗೇರು ಎಣ್ಣೆಯನ್ನು ಸಂಸ್ಕರಿಸುವಾಗ ಉಂಟಾಗುವ ರಾಸಾಯನಿಕ ಬಿಡುಗಡೆಯಿಂದ ದಟ್ಟ ಹೊಗೆ ಬಿಡುಗಡೆಯಾಗಿ ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗೇರು ಸಿಪ್ಪೆ ಸಂಸ್ಕರಣ ಘಟಕದಿಂದ ವಿಷಯುಕ್ತ ರಾಸಾಯನಿಕ ಬಿಡುಗಡೆಯಾಗುತ್ತದೆ ಅಲ್ಲದೆ ದಟ್ಟ ಹೊಗೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಪರಿಸರದಲ್ಲಿ 450ಕ್ಕೂ ಹೆಚ್ಚು ಮನೆ ಹಾಗೂ ಶಿಕ್ಷಣ ಸಂಸ್ಥೆಗಳಿದ್ದು ಜನರ ಜೀವದ ಜತೆ ಚೆಲ್ಲಾಟವಾಡುವ ಈ ಘಟಕದ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಶಬ್ಬೀರ್ ಶೇಕ್ ಎಚ್ಚರಿಸಿದರು.

ಜನರ ದಿಕ್ಕುತಪ್ಪಿಸಿ ಜನನಿಬಿಡ ಪ್ರದೇಶದಲ್ಲಿ ಈ ಘಟಕ ಸ್ಥಾಪನೆಗೆ ಹುನ್ನಾರ ನಡೆಸಲಾಗಿದೆ. ಅಧಿಕಾರಿಗಳು ಈ ಘಟಕ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಜೆರಾಲ್ಡ್ ಡಿಸಿಲ್ವಾ ಆಗ್ರಹಿಸಿದರು.

ಜನರ ಆರೋಗ್ಯ ಹಾಗೂ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವ ಈ ಘಟಕ ಸ್ಥಾಪನೆಗೆ ಪಂಚಾಯತ್ ಯಾವುದೇ ಪರವಾನಿಗೆ ನೀಡುವುದಿಲ್ಲ, ಈಗಾಗಲೇ ಗ್ರಾಮಸ್ಥರು ಪಂಚಾಯತ್‌ಗೆ ದೂರು ‌ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ಚರ್ಚಿಸಿ ಜನರಿಗೆ ಅನ್ಯಾಯವಾಗದ ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಪಂಚಾಯತ್ ಅಧ್ಯಕ್ಷ ಗಿರೀಶ್ ಅಮೀನ್ ಸ್ಪಷ್ಟನೆ ನೀಡಿದರು.

ಜನ ವಿರೋಧದ ನಡುವೆಯೂ ಅಧಿಕಾರಿಗಳು ತೆರೆಮರೆಯಲ್ಲಿ ಘಟಕಕ್ಕೆ ಅನುಮತಿ ನೀಡಲು ಪ್ರಯತ್ನಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದು, ಗ್ರಾಮಸ್ಥರು ಈ ಘಟಕ ಸ್ಥಾಪನೆ ವಿರೋಧಿಸಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ಕೊಟ್ಟಿದ್ದಾರೆ.

ವರದಿ: ಕೃಷ್ಣ ಅಜೆಕಾರ್

Edited By : Manjunath H D
Kshetra Samachara

Kshetra Samachara

28/08/2022 09:53 am

Cinque Terre

7.82 K

Cinque Terre

2

ಸಂಬಂಧಿತ ಸುದ್ದಿ