ಬಂಟ್ವಾಳ: ಗ್ರಾಮದ ಬೊಳ್ಳಾಯಿ, ಮಂಚಿ, ಕಲ್ಲಡ್ಕ-ಅಮ್ಟೂರು ಸಂಪರ್ಕ ಕಲ್ಪಿಸುವ ಕೋಮಾಲಿ ರಸ್ತೆಯಲ್ಲಿ ಬೊಳ್ಳಾಯಿಯಿಂದ ಸ್ವಲ್ಪ ಭಾಗದ ಡಾಮರು ಹಾಕಲಾಗಿದೆ. ಬಳಿಕ ಕಚ್ಚಾ ರಸ್ತೆಯಾಗಿದ್ದು, ಮಳೆಗಾಲಕ್ಕೆ ಮುಂಚೆ ರಸ್ತೆಗೆ ಮಣ್ಣು ಹಾಕಿ ಎತ್ತರ ಮಾಡಲಾಗಿತ್ತು. ಆದರೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ ಸಂಪೂರ್ಣ ಕೆಸರುಮಯಗೊಂಡಿದೆ.
ರಸ್ತೆ ಬದಿ ಚರಂಡಿ ನಿರ್ಮಿಸಿ ಅಡ್ಡಲಾಗಿ ಮೋರಿ ಹಾಕಿದ್ದರೂ, ಮೋರಿ, ಚರಂಡಿಗಿಂತ ಮೇಲ್ಭಾಗದಲ್ಲಿ ಇರುವುದರಿಂದ ನೀರು ಚರಂಡಿಯಲ್ಲಿ ತುಂಬಿ ರಸ್ತೆಯಲ್ಲೇ ಹರಿಯಬೇಕಾದ ಸ್ಥಿತಿ ಇದೆ. ಸುಮಾರು 100 ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನಿತ್ಯ ನೂರಾರು ವಾಹನಗಳು, ಸಾರ್ವಜನಿಕರು ತಮ್ಮ ಕೆಲಸಗಳಿಗೆ ಇದೇ ರಸ್ತೆ ಬಳಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿ ಕೆಸರಿನಲ್ಲಿ ಸಿಲುಕಿದ್ದು, ಬಳಿಕ ಜೆಸಿಬಿ ತರಿಸಿ ಲಾರಿ ಮೇಲಕ್ಕೆತ್ತಲಾಯಿತು. ಜತೆಗೆ ಜೀಪು, ಆಟೋ ರಿಕ್ಷಾ ನಿತ್ಯ ಕೆಸರಿನಲ್ಲಿ ಸಿಲುಕಿಕೊಳ್ಳುವ ಘಟನೆ ನಡೆಯುತ್ತಲೇ ಇರುತ್ತದೆ ಸ್ಥಳೀಯರು ಆರೋಪಿಸುತ್ತಾರೆ.
ಪ್ರಾರಂಭದಲ್ಲಿ ರಸ್ತೆ ಸ್ವಲ್ಪ ಹದಗೆಟ್ಟಿತ್ತು. ಈಗ ಜೆಸಿಬಿ ಎಲ್ಲಾ ಹೋಗಿ ಸಂಪೂರ್ಣ ಹದಗೆಟ್ಟಿದೆ. ಶುಕ್ರವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, 10 ಲೋಡ್ ಕಲ್ಲು ತರಿಸಿ ರಸ್ತೆ ಶೀಘ್ರ ದುರಸ್ತಿ ಪಡಿಸಲಾಗುತ್ತದೆ ಎನ್ನುತ್ತಾರೆ ಸ್ಥಳೀಯ ಪಿಡಿಒ ನಿರ್ಮಲಾ.
Kshetra Samachara
26/09/2020 08:00 pm