ಮಂಗಳೂರು: ಇನ್ನೂ ಎರಡು ವರ್ಷ ಪೂರ್ತಿಯಾಗದ ಈ ಪುಟ್ಟ ಪೋರಿ ತನ್ನ ಅಸಾಧಾರಣ ಪ್ರತಿಭೆಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದ್ದಾಳೆ.
ಈಕೆಯ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪದಕದ ಜೊತೆಗೆ ಪ್ರಮಾಣಪತ್ರವೂ ನೀಡಿ ಗೌರವಿಸಿದೆ. ಅಷ್ಟಕ್ಕೂ ಈಕೆಯ ಪ್ರತಿಭೆಯೇನು ಗೊತ್ತೇ.?
ಮಂಗಳೂರಿನ ಶಕ್ತಿನಗರ ನಿವಾಸಿ ವಿಕ್ರಂ ನಾಯಕ್ ಮತ್ತು ಮಧುರಾ ಪ್ರಭು ದಂಪತಿಯ ಪುತ್ರಿ ಹಿಮಾಂಶಿ ವಿ. ನಾಯಕ್ ಎಂಬ 1 ವರ್ಷ 10 ತಿಂಗಳ ಬಾಲಕಿ ತನ್ನ ಅಸಾಧಾರಣ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಇನ್ನೂ ಎರಡು ವರ್ಷ ತುಂಬದ ಪೋರಿ ಹಿಮಾಂಶಿ ವಿ.ನಾಯಕ್ 9 ಪ್ರಾಣಿಗಳನ್ನು, 5 ರೀತಿಯ ಗೊಂಬೆಗಳನ್ನು, 7 ಹಣ್ಣುಗಳನ್ನು, 12 ಹಕ್ಕಿಗಳನ್ನು, ದೇಹದ ವಿವಿಧ 15 ಅಂಗಗಳನ್ನು ಗುರುತಿಸುತ್ತಾಳೆ. ತನ್ನ ತೊದಲು ನುಡಿಯಿಂದಲೇ ಇಂಗ್ಲಿಷ್ ವರ್ಣಮಾಲೆಯ 'ಎ'ಯಿಂದ 'ಝಡ್'ವರೆಗಿನ 26 ಅಕ್ಷರಗಳನ್ನು ಅಕ್ಷರಕೊಂದು ಪದವನ್ನು ಸೇರಿಸಿ ತಪ್ಪಿಲ್ಲದೆ ಉಚ್ಚಾರ ಮಾಡುತ್ತಾಳೆ. ಮೂರು ಇಂಗ್ಲಿಷ್ ಪದ್ಯಗಳನ್ನು ಹೇಳುತ್ತಾಳೆ.
ಇನ್ನೂ ಈಕೆಯ ಪ್ರತಿಭೆಯ ಪಟ್ಟಿ ಮುಗಿದಿಲ್ಲ. 1ರಿಂದ 10ರವರೆಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಂಖ್ಯೆಗಳನ್ನು ಹೇಳುತ್ತಾಳೆ. 10 ಪ್ರಾಣಿ ಮತ್ತು ಪಕ್ಷಿಗಳು ಕೂಗುವುದನ್ನು ಮಿಮಿಕ್ರಿ ಮಾಡುತ್ತಾಳೆ. ಹಿಂಮಾಶಿ ವಿ.ನಾಯಕ್ ಈ ಎಲ್ಲಾ ಸಾಧನೆಗಳನ್ನು ತಾಯಿ ಮಧುರಾಪ್ರಭು ವೀಡಿಯೋ ದಾಖಲಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಕಳುಹಿಸಿದ್ದರು. ಇದೀಗ ಈ ಪುಟ್ಟ ಪೋರಿಯ ಪ್ರತಿಭೆಯನ್ನು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಾಗಿದ್ದಲ್ಲದೆ, ಪ್ರಶಸ್ತಿ ಪದಕದ ಜೊತೆಗೆ ಪ್ರಮಾಣಪತ್ರವೂ ನೀಡಿ ಗೌರವಿಸಿದೆ.
PublicNext
18/07/2022 09:09 am