ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಯಕ್ಷಲೋಕದ ಅಪ್ರತಿಮ 'ಧೀಂಗಿಣ ವೀರ' ಪುತ್ತೂರು ಡಾ. ಶ್ರೀಧರ ಭಂಡಾರಿ

ಮಂಗಳೂರು: ನಿನ್ನೆ ಬೆಳಗ್ಗೆ ನಿಧನರಾದ ಯಕ್ಷಲೋಕದ 'ಸಿಡಿಲ ಮರಿ' ಪುತ್ತೂರಿನ ಡಾ. ಶ್ರೀಧರ ಭಂಡಾರಿಯವರು(73) ' ಧೀಂಗಿಣ ವೀರ' ರೆಂದೇ ಸುಪ್ರಸಿದ್ಧರಾಗಿದ್ದರು.

ಧರ್ಮಸ್ಥಳ ಮೇಳದ ಕಲಾವಿದರಾಗಿ ತಿರುಗಾಟ ಮಾಡಿದ್ದ ಶ್ರೀಧರ ಅವರು, 50 ವರ್ಷಗಳಿಗೂ ಹೆಚ್ಚು ಕಾಲ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ವೇಷಧಾರಿಯಾಗಿ ವಿವಿಧ ಯಕ್ಷಗಾನ ಮೇಳಗಳಲ್ಲಿ ದುಡಿದವರು‌. ಪುಂಡು ವೇಷದಲ್ಲಂತೂ ಬಹು ಖ್ಯಾತರಾಗಿರುವ ಶ್ರೀಧರ ಭಂಡಾರಿಯವರ ಚಕ್ರವ್ಯೂಹದ 'ಅಭಿಮನ್ಯು' ಜನಮಾನಸದಲ್ಲಿ ಈಗಲೂ ಆಳವಾಗಿ ಬೇರೂರಿದ ಅಭಿಮಾನದ ಪಾತ್ರ. ಅಲ್ಲದೆ ಬಭ್ರುವಾಹನ, ಅಶ್ವತ್ಥಾಮ, ಕುಶ, ಭಾರ್ಗವ, ಶ್ರೀ ಕೃಷ್ಣ, ಶ್ರೀ ರಾಮ ಮುಂತಾದ ಪಾತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು.

ಕಿರೀಟ ವೇಷಗಳಲ್ಲಿ ಇಂದ್ರಜಿತು, ರಕ್ತಬೀಜಾಸುರ, ಹಿರಣ್ಯಾಕ್ಷ, ವಿದ್ಯುನ್ಮಾಲಿ ಮುಂತಾದ ಪಾತ್ರಗಳನ್ನೂ ಅತ್ಯುತ್ತಮವಾಗಿ ನಿರ್ವಹಿಸಿದವರು. ಕಲಾ ಚಾತುರ್ಯವನ್ನು ಒರೆಗೆ ಹಚ್ಚುವ ವೀರ ಹನುಮಾನ್ ಪಾತ್ರದಲ್ಲೂ ಸೈ ಎನ್ನಿಸಿಕೊಂಡವರು.

ಧೀಂಗಿಣದಲ್ಲೂ ಅಗ್ರಗಣ್ಯ: ಅತಿ ತೀವ್ರಗತಿಯ ನಾಟ್ಯ ಲಯವನ್ನು ಹೊಂದಿರುವ ಶ್ರೀಧರ ಭಂಡಾರಿಯವರು, ಈ ವಿಶೇಷತೆಯನ್ನು ನಿರಂತರ ಉಳಿಸಿಕೊಂಡು ಬಂದವರು. ಹುಡಿ ನಾಟ್ಯ ಮತ್ತು ಆಕರ್ಷಣೀಯ ಧೀಂಗಿಣದ ಶೈಲಿಯಿಂದಾಗಿಯೇ ಈ " ಹಾರುವ ಕಲಾ ಚತುರ" ಯಕ್ಷರಂಗದ ಸಿಡಿಲಮರಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಸುಮಾರು 250 ರಿಂದ 300 ಧೀಂಗಿಣಗಳನ್ನು ಹಾರುತ್ತಿದ್ದ ಅತ್ಯಪರೂಪದ ಕಲಾವಿದರಿವರು! ಧೀಂಗಿಣಕ್ಕೆ ಬಹಳ ದೈಹಿಕ ಶಕ್ತಿ ಸಾಮರ್ಥ್ಯವೂ, ಧೈರ್ಯವೂ ಇರಬೇಕು.

ಪುತ್ತೂರು ಶ್ರೀಧರ ಭಂಡಾರಿಯವರ ಯಕ್ಷಗಾನ ಸೇವೆಗಾಗಿ ಅಮೆರಿಕದ ಯುನಿವರ್ಸಿಟಿಯೊಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ಮನ್ನಣೆಗೆ ವಿಶ್ವಾದ್ಯಂತ ಪಾತ್ರರಾದ ಕೇವಲ 35 ಕಲಾವಿದರಲ್ಲಿ ಪುತ್ತೂರು ಶ್ರೀಧರ ಭಂಡಾರಿಯವರೂ ಒಬ್ಬರು ಎನ್ನುವುದು ಕರಾವಳಿ ಜಿಲ್ಲೆಗೆ ಹೆಮ್ಮೆಯ ವಿಷಯ.

Edited By : Manjunath H D
Kshetra Samachara

Kshetra Samachara

20/02/2021 12:10 pm

Cinque Terre

16.08 K

Cinque Terre

2

ಸಂಬಂಧಿತ ಸುದ್ದಿ