ಮಂಗಳೂರು: ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಯೋರ್ವರಿಗೆ ಸರಿಯಾಗಿ ವೈದ್ಯಕೀಯ ಸೌಲಭ್ಯ ನೀಡುತ್ತಿಲ್ಲ. ರೋಗಿಯ ಬಗ್ಗೆ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆಯ ಮುಂಭಾಗ ಜನ ಜಮಾಯಿಸಿದ್ದು, ಶಾಸಕ ವೇದವ್ಯಾಸ ಕಾಮತ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಕಾರ್ಕಳದ ರಮೇಶ್ ಎಂಬ ರೋಗಿಯೋರ್ವರಿಗೆ ವಿಪರೀತ ತಲೆನೋವು ಹಾಗೂ ವಾಂತಿಯೆಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭ ಆತನಿಗೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರೋದು ತಿಳಿದುಬಂದಿದೆ. ಆದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗೆ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ. ರೋಗಿಗೆ ವಿಪರೀತ ತಲೆನೋವು ಇದ್ದರೂ, ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆದರೆ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಸದಾಶಿವ ಶಾನುಭಾಗ್ ಮಾತನಾಡಿ, ರೋಗಿಯನ್ನು ನಮ್ಮ ಹಿರಿಯ ವೈದ್ಯಾಧಿಕಾರಿಗಳು ದಾಖಲಾದ ಬಳಿಕ ಎರಡೂ ದಿನವೂ ಬಂದು ತಪಾಸಣೆ ನಡೆಸಿದ್ದಾರೆ. ಅಲ್ಲದೆ, ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ತಲೆನೋವು ಏಕಾಏಕಿ ಕಡಿಮೆಯಾಗದೆ ನಿಧಾನವಾಗಿ ಶಮನವಾಗಲಿದೆ. ವೈದ್ಯರು ಹಾಗೂ ರೋಗಿಯ ಸಂಬಂಧಿಕರ ಮಧ್ಯೆ ಸಂವಹನ ಕೊರತೆಯಿಂದ ಸ್ವಲ್ಪ ಗೊಂದಲವುಂಟಾಗಿದೆ ಎಂದು ಹೇಳಿದರು. ಶಾಸಕ ವೇದವ್ಯಾಸ ಕಾಮತ್ ಮಧ್ಯಪ್ರವೇಶಿಸಿ ಈ ಬಗ್ಗೆ ತನಿಖೆ ನಡೆಸಿ ಡಿ.ಸಿ.ಯವರಿಗೆ ವರದಿ ಸಲ್ಲಿಸಬೇಕೆಂದು ಹೇಳಿದ್ದಾರೆ. ನಿನ್ನೆಯೂ ಕಾಸರಗೋಡಿನ ರೋಗಿಯೋರ್ವರು ಮೃತಪಟ್ಟ ಬಗ್ಗೆ ವೆನ್ಲಾಕ್ ನ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರು.
Kshetra Samachara
26/10/2021 10:36 pm