ಸುರತ್ಕಲ್: ಸುರತ್ಕಲ್‌ನಲ್ಲಿ ಭಜರಂಗದಳ ಮತ್ತು ದುರ್ಗಾವಾಹಿನಿಯ ವತಿಯಿಂದ ನಡೆದ ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೊಂಡಾಲ ಚಿತ್ತರಂಜನ್ ಶೆಟ್ಟಿ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಚೈತ್ರ ಕುಂದಾಪುರ ಅವರು ಅತ್ಯಂತ ಕೆಟ್ಟ, ಸಾಮಾಜಿಕ ಸ್ವಾಸ್ಥ್ಯ ಕದಡುವ ದ್ವೇಷಪೂರಿತ ಮತ್ತು ಕರಾವಳಿಯ ಕೋಮುಭಾವನೆಗಳನ್ನು ಕೆರಳಿಸುವ ಭಾಷಣ ಮಾಡಿದ್ದಾರೆ. ಆಕೆ ಮತ್ತು ಸಂಘಟಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಭಾಷಣದಲ್ಲಿ ಒಂದು ಕೋಮಿನ ಜನರನ್ನು ಕಾನೂನುಬಾಹಿರ ಪದಗಳನ್ನು ಬಳಸಿ ಅವಮಾನಿಸಿರುವುದಲ್ಲದೆ, ಆ ಕೋಮಿನ ವಿರುದ್ಧ ಜನತೆಯನ್ನು ಎತ್ತಿಕಟ್ಟುವ ಮತ್ತು ದ್ವೇಷ ಹುಟ್ಟಿಸುವ ರೀತಿಯಲ್ಲಿ ಉದ್ರೇಕಕಾರಿಯಾಗಿ ಪದಗಳನ್ನು ಬಳಸಲಾಗಿದೆ. ಈಕೆಯ ಭಾಷಣದಿಂದ ಪ್ರಚೋದನೆಗೊಳಗಾಗಿ ಕ್ರಿಯೆ ಪ್ರಕ್ರಿಯೆಗಳು ಉ೦ಟಾಗುವ, ಕೋಮು ಘರ್ಷಣೆಯ ಭೀತಿ ಎದುರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸರ ವಾದಗಳು ನಡೆಯುತ್ತಿವೆ ಎಂದಿದ್ದಾರೆ.
ಚೈತ್ರ ಕುಂದಾಪುರ ಭಾಷಣದಲ್ಲಿ ತುಳುನಾಡಿನ ಕಾರಣಿಕ ಪುರುಷರು, ಆರಾಧ್ಯ ದೈವಗಳಾದ ಕೋಟ ಚೆನ್ನಯರನ್ನು ದುರುಪಯೋಗಪಡಿಸಿ ತುಳುವರ ಧಾರ್ಮಿಕ ನಂಬಿಕೆಗೆ ಘಾಸಿಯುಂಟು ಮಾಡಿದ್ದಾಳೆ. ಕೋಟಿ ಚೆನ್ನಯರು ಹಿಡಿಯುವ ಸುರಿಯ ಎಂಬ ಪವಿತ್ರ ಆಯುಧವನ್ನು ರೌಡಿಗಳು ಕೋಮು ಘರ್ಷಣೆಯಲ್ಲಿ ಬಳಸುವ ತಲವಾರಿಗೆ ಹೋಲಿಸಿರುವುದು ಈಕೆಯ ಭಾಷಣದಲ್ಲಿ ದೆ. ಆಘಾತಕಾರಿ, ಧಾರ್ಮಿಕ ನಂಬಿಕೆಗೆ ಘಾಸಿಯುಂಟು ಮಾಡುವ ಪ್ರಯತ್ನ ಇದಾಗಿದೆ ಎಂದು ದೂರಲಾಗಿದೆ.
ಭಾಷಣದಲ್ಲಿ ಬಂಟ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಪಕ್ಷದ ಮಾಜಿ ಸಚಿವರೊಬ್ಬರ ಮಗಳಿಗೆ ಮುಸ್ಲಿಮ್ ಯುವಕನೊಂದಿಗೆ ಪ್ರೇಮ ಸಂಬಂಧವಿದೆ, ಆತನೊಂದಿಗೆ ಮದುವೆಗೆ ಹಠ ಹಿಡಿದಿದ್ದಾಳೆ ಎಂದು ಹೇಳಿರುವುದು ವರದಿಯಾಗಿದೆ.
ಇದು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾಗುವ ಸನ್ನಿವೇಶಕ್ಕೆ ಎಡೆಮಾಡಿಕೊಡಬಹುದು. ಅಷ್ಟಲ್ಲದೆ ಇದು ಕಾಂಗ್ರೆಸ್ ಪಕ್ಷದ, ಬಂಟ ಸಮುದಾಯದ ಘನತೆಗೆ ಏಕಕಾಲದಲ್ಲಿ ಸಾರ್ವಜನಿಕವಾಗಿ ಕುಂದು ಉಂಟು ಮಾಡುವಂತಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಕುಟುಂಬದ ಹೆಣ್ಣು ಮಕ್ಕಳ ಕುರಿತು ಮಾನಹಾನಿಕಾರ ಸುಳ್ಳು ಮಾಹಿತಿಗಳನ್ನು ಸಾರ್ವಜನಿಕವಾಗಿ ಆಡಿರುವುದು ಅತ್ಯಂತ ಕೆಟ್ಟ ನಡವಳಿಕೆಯಾಗಿದೆ ಎಂದಿದ್ದಾರೆ.
ಇಂತಹ ನಿಂದನೆಯಿಂದ ಕಾಂಗ್ರೆಸ್ ಪಕ್ಷ ಹಾಗೂ ಪಕ್ಷದ ನಾಯಕರ ಕುಟುಂಬ ಸಾರ್ವಜನಿಕವಾಗಿ ಅವಮಾನಕ್ಕೆ ಗುರಿಯಾಗುವಂತಾಗಿದೆ. ಈಕೆಯ ಭಾಷಣ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಠಾಣೆಯ ಪೊಲೀಸರ ಸಮ್ಮುಖದಲ್ಲಿ ನಡೆದಿರುವುದರಿಂದ ಈ ಎಲ್ಲಾ ವಿಷಯಗಳು ತಮ್ಮ ಗಮನಕ್ಕೆ ಬಂದಿರುತ್ತದೆ. ಈ ವಿಷಯದ ಸಾಮಾಜಿಕ, ರಾಜಕೀಯ ಗಂಭೀರತೆಯನ್ನು ಮನಗಂಡು ತಾವು ಭಾಷಣಕಾರ್ತಿ ಚೈತ್ರ ಹಾಗೂ ಕಾರ್ಯಕ್ರಮ ಸಂಯೋಜಕರನ್ನು ಬಂಧಿಸಿ ಸರಿಯಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರರಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ಸುರತ್ಕಲ್ ಠಾಣೆಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.
Kshetra Samachara
06/10/2021 09:15 pm