ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿರುವ ಬೆನ್ನಲ್ಲೇ ಡೆಂಗ್ಯು ಹಾವಳಿ ಜೋರಾಗಿದೆ. ಮಳೆ ಕಡಿಮೆಯಾಗುತ್ತಿರುವುದರಿಂದ ಸೊಳ್ಳೆ ಉತ್ಪತ್ತಿ ಕೂಡ ಹೆಚ್ಚುತ್ತಿದೆ.ಪರಿಣಾಮವಾಗಿ ಡೆಂಗ್ಯುನಂತಹ ಮಾರಕ ಕಾಯಿಲೆ ಕಡೆ ಜನರು ಗಮನ ಹರಿಸದಿರುವುದು ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣ ಹೆಚ್ಚಲು ಕಾರಣವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಕಳೆದ ವರ್ಷ ಈ ಹೊತ್ತಿಗೆ 130 ಡೆಂಗ್ಯು ಪ್ರಕರಣ ದಾಖಲಾಗಿತ್ತು. ಆದರೆ ಈ ವರ್ಷ ಆರಂಭದಲ್ಲೇ 276ಪ್ರಕರಣ ದಾಖಲಾಗಿದೆ. ಕೊರೋನಾ ಆತಂಕದ ನಡುವೆ ಸೊಳ್ಳೆಯಿಂದ ಹರಡುವ ಮಾರಕ ಕಾಯಿಲೆ ಕಡೆ ಜನರು ಗಮನ ಹರಿಸದಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಮನೆ ಸುತ್ತಲೂ ನೀರು ನಿಲ್ಲದಂತೆ ಜಾಗೃತಿ ಮೂಲಕ ನಿಯಂತ್ರಣಕ್ಕೆ ತರಬಹುದು. ಆದರೆ ಎಕ್ರೆಗಟ್ಟಲೆ ಹಬ್ಬಿರುವ ಅಡಿಕೆ ತೋಟಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ನಿಯಂತ್ರಣ ಮಾಡುವುದೇ ಇಲಾಖೆಗೆ ದೊಡ್ಡ ಸವಾಲಾಗಿದೆ.
ಆರೋಗ್ಯ ಇಲಾಖೆ ಈ ವರ್ಷ ಕೋವಿಡ್ ನಿಯಂತ್ರಣಕ್ಕೆ ರಚಿಸಿದ ಟಾಸ್ಕ್ ಫೋರ್ಸ್ ಹಾಗೂ ನಗರಸಭೆ,ಪಂಚಾಯತ್ ಸಹಾಯವನ್ನು ಡೆಂಗ್ಯೂ ನಿಯಂತ್ರಣಕ್ಕೂ ಪಡೆದುಕೊಂಡಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಂತ ನೀರಲ್ಲಿ ಔಷಧಿ ಸಿಂಪಡನೆ, ಮನೆ ಮನೆಗಳಲ್ಲಿ ಜಾಗೃತಿ ಹೀಗೆ ಹತ್ತು ಹಲವು ಕಾರ್ಯಕ್ರಮ ನಡೆಸುವುದರೊಂದಿಗೆ ನಗರಸಭೆ ಸಹಕಾರದೊಂದಿಗೆ ಬೈಲಾ ಹೊರ ತರುವ ಕಠಿಣ ಕಾನೂನು ಕೂಡ ಜಾರಿ ಮಾಡಲು ಸಿದ್ದತೆ ನಡೆಸಿದೆ. ಈ ಬೈಲಾ ಪ್ರಕಾರ ಕಟ್ಟಡ ನಿರ್ಮಾಣ ನಡೆಸುವವರು, ತೋಟದ ಮಾಲೀಕರು, ಅಪಾರ್ಟ್ ಮೆಂಟ್ ಮಾಲೀಕರು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಸುತ್ತಮುತ್ತ ನೀರು ನಿಂತಲ್ಲಿ ದೊಡ್ಡ ಮೊತ್ತದ ದಂಡ, ಕ್ರಿಮಿನಲ್ ಮೊಕದ್ದಮೆ ಅಥವಾ ಆ ಕಟ್ಟಡದ ಲೈಸೆನ್ಸ್ ರದ್ದು ಮಾಡುವ ಕಾನೂನು ಈ ಬೈಲಾದಲ್ಲಿ ಸೇರ್ಪಡೆ ಮಾಡಲು ಆರೋಗ್ಯ ಇಲಾಖೆ ಸಿದ್ದತೆ ನಡೆಸಿದೆ.
ಒಟ್ಟಾರೆ ಡೆಂಗ್ಯು ಕೂಡ ಕೊರೋನಾಕ್ಕಿಂತಲೂ ಅಪಾಯಕಾರಿ. ಸಾವು ಕೂಡ ಬರಬಹುದು.ಎರಡು ವರ್ಷದ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಹೆಚ್ಚಿನ ಜನ ಡೆಂಗ್ಯೂಗೆ ಬಲಿಯಾಗಿದ್ದರು. ಹೀಗಾಗಿ ಜನರು ಜಾಗೃತರಾಗಬೇಕಿದೆ.
Kshetra Samachara
05/08/2021 07:06 pm