ವರದಿ: ರಹೀಂ ಉಜಿರೆ
ಉಡುಪಿ: ಪಬ್ಲಿಕ್ ಪ್ರೈವೇಟ್ ಪಾರ್ಟನರ್ ಶಿಪ್ ( ಪಿಪಿಪಿ) ನ ಸೈಡ್ ಎಫೆಕ್ಟ್ ಗಳು ಈಗ ಒಂದೊಂದಾಗಿ ಹೊರಬರುತ್ತಿವೆ.ದುಬೈ ದಣಿ ಬಿ.ಆರ್ ಶೆಟ್ಟಿ ಸಾಮ್ರಾಜ್ಯ ಪತನ ಬಳಿಕ ಇಲ್ಲಿಯ ಸರಕಾರಿ ಬಿಆರ್ ಎಸ್ ಆಸ್ಪತ್ರೆ ನಿರ್ವಹಣೆ ಕಷ್ಟ ಆಗಿರುವುದು ಹಳೆ ಸುದ್ದಿ.ಈಗ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ವಿಭಾಗವೂ ಕೋಮಾವಸ್ಥೆ ತಲುಪಿದೆ!
ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕದ ಸೇವೆಯ ಗುತ್ತಿಗೆಯನ್ನು ಬಿ.ಆರ್.ಎಸ್. ಕಂಪನಿ ವಹಿಸಿಕೊಂಡಿತ್ತು. 2017 ರಲ್ಲಿ ಮುಂದಿನ 5 ವರ್ಷಗಳ ವರೆಗಿನ ನಿರ್ವಹಣೆಯ ಒಡಂಬಡಿಕೆಯನ್ನು ಕರ್ನಾಟಕ ಸರಕಾರದೊಂದಿಗೆ ಈ ಖಾಸಗೀ ಕಂಪನಿ ಮಾಡಿಕೊಂಡಿತ್ತು. ಆದರೆ ಬಿ.ಆರ್.ಎಸ್. ಕಂಪನಿ ನಷ್ಟದಲ್ಲಿರುವುದರಿಂದ ಕಳೆದ ಕೆಲವು ತಿಂಗಳ ಹಿಂದೆ ಡಯಾಲಿಸೀಸ್ ಘಟಕದ ನಿರ್ವಹಣೆ ತನ್ನಿಂದ ಅಸಾಧ್ಯ ಎಂದು ಸರಕಾರಕ್ಕೆ ಪತ್ರ ಬರೆದಿದೆ.ಇದೀಗ ಡಯಾಲಿಸೀಸ್ ಘಟಕದ ಸಿಬ್ಬಂದಿಗಳಿಗೆ ಕಳೆದ 5 ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಸರಕಾರ ಹಾಗೂ ಖಾಸಗಿ ಸಂಸ್ಥೆಯ ನಡುವೆ ನಡೆದಿರುವ ಒಪ್ಪಂದದಂತೆ ನಡೆದುಕೊಳ್ಳುವಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದ್ದು 30, ಜೂನ್ 2021ರವರೆಗೆ ಸುಮಾರು 33 ಕೋಟಿ ರುಪಾಯಿಗಳನ್ನು ಬಾಕಿ ಇಟ್ಟಿರುವುದೇ ಈ ಎಲ್ಲಾ ಎಡವಟ್ಟುಗಳಿಗೆ ಕಾರಣ ಎಂಬುದು ಸಂಸ್ಥೆಯ ಆರೋಪ. ಸದ್ಯ ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ವಿಭಾಗದ ಸಿಬ್ಬಂದಿಗೆ ವೇತನ ಪಾವತಿಯಾಗದೇ ಇರುವುದರಿಂದ ಅವರೆಲ್ಲ ಕೆಲಸ ಸ್ಥಗಿತಗೊಳಿಸುವ ಆತಂಕ ಒಂದೆಡೆಯಾದರೆ ,ಈ ವಿಭಾಗದಲ್ಲಿ ಇನ್ನೂ ಹಲವು ಸಮಸ್ಯೆಗಳು ತಲೆದೋರಿವೆ.
ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ಡಯಾಲಿಸಿಸ್ ಗೆ ಅಗತ್ಯ ಇರುವ ರಾಸಾಯನಿಕ ಸಾಮಾಗ್ರಿಗಳು ಹಾಗೂ ಫಿಲ್ಟರ್‌ಗಳು ಸಂಪೂರ್ಣವಾಗಿ ಖಾಲಿಯಾಗಿರುವುದು ಅತ್ಯಂತ ಗಂಭೀರ ವಿಚಾರ. ಇದರಿಂದಾಗಿ
ಬಡ ರೋಗಿಗಳು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಾವು-ನೋವು ಸಂಭವಿಸುವ ದಿನಗಳು ದೂರವಿಲ್ಲ,ಎರಡು ದಿನ ಹಿಂದೆ ಆರೋಗ್ಯವಾಗಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ಘಟನೆಯೂ ಇಲ್ಲಿ ನಡೆದಿದೆ.
ಸದ್ಯ ತಿಂಗಳಿಗೆ ಸುಮಾರು ತೊಂಬತ್ತರಷ್ಟು ರೋಗಿಗಳು ಡಯಾಲಿಸಿಸ್ ಗಾಗಿ ಇಲ್ಲಿಗೆ ಬರುತ್ತಿದ್ದಾರೆ.ಸರಕಾರ ಬಡಜನರ ಆರೋಗ್ಯದ ದೃಷ್ಟಿಯಿಂದ ಇಲ್ಲಿನ ಸಮಸ್ಯೆ ಬಗೆಹರಿಸಬೇಕು ಎಂದು ಕರವೇ ಆಗ್ರಹಿಸಿದೆ.
ಸೋಮವಾರದೊಳಗೆ ಡಯಾಲಿಸಿಸ್ ಘಟಕದ ಸಮಸ್ಯೆ ಬಗೆಹರಿಸದಿದ್ದರೆ ಆಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆಯನ್ನು ಕರವೇ ನೀಡಿದೆ.ಸರಕಾರ ಬಡಜನರ ಆರೋಗ್ಯದ ಜೊತೆ ಚೆಲ್ಲಾಟ ಆಡದೆ ಇತ್ತ ಕಡೆ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.
Kshetra Samachara
13/11/2021 07:28 pm