ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ತಂದಿದ್ದ ರಾತ್ರಿ ಹಾಗೂ ವಾರಾಂತ್ಯ ಕರ್ಫ್ಯೂ ರದ್ದುಗೊಂಡಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋಲ,ಯಕ್ಷಗಾನ,ನೇಮಗಳು ಮತ್ತೆ ಗರಿಗೆದರಿದ್ದು ಕಲಾವಿದರು ನಿಟ್ಟುಸಿರು ಬಿಟ್ಟಿದ್ದಾರೆ.
ಸರ್ಕಾರದ ಈ ನಿರ್ಧಾರ ಶ್ರಮಿಕ ವರ್ಗಕ್ಕೆ ದೊಡ್ಡ ಖುಷಿಯನ್ನೇ ಕೊಟ್ಟಿದೆ.ಕರಾವಳಿಯ ಕಲಾವಿದರು ಮತ್ತೆ ಬಣ್ಣ ಹಚ್ಚಿ ಬದುಕಿನ ರಥ ಎಳೆಯಲು ಸಜ್ಜಾಗಿದ್ದಾರೆ.
ನವೆಂಬರ್‌ನಿಂದ ಮಾರ್ಚ್‌ತನಕ ಕರಾವಳಿಯಲ್ಲಿ ಯಕ್ಷಗಾನ, ನೇಮೋತ್ಸವಗಳು ಸಾಮಾನ್ಯ.ಸಾವಿರಾರು ಕಲಾವಿದರು ಇದನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ.ಆದರೆ ಸರ್ಕಾರದ ಕರ್ಫ್ಯೂ ಆದೇಶ ಇವಕ್ಕೆಲ್ಲ ದೊಡ್ಡ ಹೊಡೆತ ನೀಡಿತ್ತು.ಈ ಹಿಂದಿನ ಎರಡು ಲಾಕ್‌ಡೌನ್‌ನಿಂದ ಅಪಾರ ಕಷ್ಟ ಅನುಭವಿಸಿದ್ದ ಕಲಾವಿದರಿಗೆ ಈ ಬಾರಿಯ ವಾರಾಂತ್ಯದ ಕರ್ಫ್ಯೂ, ಗಾಯದ ಮೇಲೆ ಬರೆ ಎಳೆದಂತಾಗಿತ್ತು.
ಕಳೆದ ಲಾಕ್‌ಡೌನ್‌ನಿಂದ ಸ್ಥಗಿತವಾಗಿದ್ದ ಹಲವು ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ವಾರ್ಷಿಕ ಉತ್ಸವ ಕಾರ್ಯಗಳು ಈ ಬಾರಿ ಮಾಡುವುದಕ್ಕೆ ದೇವಸ್ಥಾನಗಳ ಆಡಳಿತ ಮಂಡಳಿ, ಗ್ರಾಮಸ್ಥರು ನಿರ್ಧಾರ ಮಾಡಿದ್ದರು. ಆದರೆ ಸರ್ಕಾರ ಮೂರನೇ ಅಲೆಯ ನೆಪ ಮುಂದಿಟ್ಡು ಸೆಮಿ ಲಾಕ್‌ಡೌನ್ ಘೋಷಣೆ ಮಾಡಿತ್ತು.ಇದರಿಂದಾಗಿ ಭಕ್ತರಿಗೆ ನಿರಾಸೆಯಾಗಿತ್ತು.ಇನ್ನು ಯಕ್ಷಗಾನ ಕಲಾವಿದರು ಕೂಡ ನೈಟ್ ಕರ್ಪ್ಯೂ ತೆರವಿನಿಂದಾಗಿ ನಿಟ್ಟುಸಿರು ಬಿಡುವಂತಾಗಿದೆ.
ಒಟ್ಟಾರೆ ಕಳೆದೆರಡು ವರ್ಷಗಳಿಂದ ಕರಾವಳಿಯ ಸಾವಿರಾರು ಕಲಾವಿದರ ಬದುಕು ಅನಿಶ್ಚಿತತೆಯಿಂದಲೇ ಕೂಡಿತ್ತು.ಇದೀಗ ಲಾಕ್‌ಡೌನ್ ಬರೆಯಿಂದ ಕಂಗೆಟ್ಟಿದ್ದ ಕಲಾವಿದರು ಖುಷಿಗೊಂಡಿದ್ದು ,ಕೊರೋನಾ ಮಹಾಮಾರಿ ಶಾಶ್ವತವಾಗಿ ತೊಲಗಿ ಮೊದಲಿನಂತೆ ಆಗಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.
Kshetra Samachara
04/02/2022 01:09 pm