ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಪರಾರಿಯಾಗಲು ಯತ್ನಿಸಿದವರಿಗೆ ಪೊಲೀಸರಿಂದ ಖಡಕ್ ವಾರ್ನಿಂಗ್

ಮುಲ್ಕಿ: ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ಕಳೆದ ಒಂದು ವಾರದಿಂದ ರೈಲಿನಲ್ಲಿ ಅನ್ಯ ರಾಜ್ಯಗಳಿಂದ ಬರುವ ಪ್ರಯಾಣಿಕರ ಕೋವಿಡ್ ತಪಾಸಣೆ ಕಟ್ಟುನಿಟ್ಟಾಗಿ ನಡೆಯುತ್ತಿದೆ.

ಸೋಮವಾರ ಬೆಳಗ್ಗೆ ಮುಂಬೈನಿಂದ ಆಗಮಿಸಿದ ಮತ್ಸ್ಯಗಂಧ ರೈಲಿನ 45 ಪ್ರಯಾಣಿಕರಲ್ಲಿ 15 ಪ್ರಯಾಣಿಕರ ಕೋವಿಡ್ ವರದಿಯನ್ನು ನೋಂದಣಿ ಮಾಡಿಕೊಳ್ಳಲಾಗಿದೆ. 30 ಪ್ರಯಾಣಿಕರ ರ್ಯಾಪಿಡ್ ಟೆಸ್ಟ್ ಹಾಗೂ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಸೋಮವಾರ ಕೋವಿಡ್ ತಪಾಸಣೆ ವೇಳೆ ಅನ್ಯ ರಾಜ್ಯಗಳ ಇಬ್ಬರು ಪ್ರಯಾಣಿಕರು ಪರಾರಿಯಾಗಲು ಯತ್ನಿಸಿದ್ದು, ಕೂಡಲೇ ಮುಲ್ಕಿ ಪೊಲೀಸರು ಕಾರ್ಯಪ್ರವೃತ್ತರಾಗಿ ಅವರನ್ನು ಹಿಡಿದು ಎಚ್ಚರಿಕೆ ನೀಡಿದ್ದಾರೆ.

ಕಳೆದ ಕೆಲದಿನಗಳಿಂದ ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ಮುಂಬೈ ಸಹಿತ ಅನ್ಯ ರಾಜ್ಯಗಳಿಂದ ಬರುವ ಪ್ರಯಾಣಿಕರ ಕೋವಿಡ್ ತಪಾಸಣೆ ನಡೆಯುತ್ತಿರುವ ಸಂದರ್ಭದಲ್ಲಿ ಕೆಲ ಪ್ರಯಾಣಿಕರು ಆರೋಗ್ಯ ಸಿಬ್ಬಂದಿ ಜೊತೆ ಉಡಾಫೆಯಾಗಿ ವರ್ತಿಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಸೋಮವಾರದಿಂದ ತಪಾಸಣೆ ನಡೆಯುವ ಸಮಯದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಹಾಗೂ ಪ್ರಯಾಣಿಕರಿಗೆ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ನೇತೃತ್ವದಲ್ಲಿ ಉಪಹಾರದ ವ್ಯವಸ್ಥೆ ಮಾಡಿದ್ದು ವ್ಯಾಪಕ ಅಭಿನಂದನೆ ವ್ಯಕ್ತವಾಗಿದೆ.

ಆರೋಗ್ಯ ಕೇಂದ್ರದ ಸಿಬ್ಬಂದಿ ಮಾರ್ಗರೇಟ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಪ್ರತಿಭಾ ಹೆಬ್ಬಾರ್, ರೈಲ್ವೆ ಸ್ಟೇಷನ್ ಮಾಸ್ಟರ್ ಡಿವಿ ಸುರೇಶ್ ಮತ್ತಿತರರು ಪ್ರಯಾಣಿಕರಲ್ಲಿ ಶಿಸ್ತು ಕಾಪಾಡಲು ಪ್ರಮುಖ ಪಾತ್ರವಹಿಸಿದ್ದಾರೆ.

ಭಾನುವಾರವೂ ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ಬೆಳಗಿನ ಜಾವ ಎರಡು ರೈಲುಗಳಲ್ಲಿ ಅನ್ಯ ರಾಜ್ಯಗಳಿಂದ ಪ್ರಯಾಣಿಕರು ಆಗಮಿಸಿ ಕೊರೋನಾ ಪರೀಕ್ಷೆ ವೇಳೆ ಆರೋಗ್ಯ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದು ತಿಳಿದುಬಂದಿದೆ.

Edited By : Manjunath H D
Kshetra Samachara

Kshetra Samachara

09/08/2021 06:42 pm

Cinque Terre

27.12 K

Cinque Terre

1