ಮುಲ್ಕಿ: ಸರಕಾರದ ಮೂಲ ಸೌಕರ್ಯಗಳನ್ನು ಗ್ರಾಮ- ಗ್ರಾಮಗಳಲ್ಲಿ ಕಲ್ಪಿಸಿ ಸಮಸ್ಯೆ ಬಗೆಹರಿಸುವುದು ಗ್ರಾಮ ವ್ಯಾಸ್ತವ್ಯದ ಉದ್ದೇಶ ಎಂದು ಮುಲ್ಕಿಯ ವಿಶೇಷ ತಹಸೀಲ್ದಾರ್ ವೆಂಕಟೇಶ್ ಹೇಳಿದರು.
ಅವರು ಬಳ್ಕುಂಜೆ ಗ್ರಾಪಂನಲ್ಲಿ ನಡೆದ ದ.ಕ. ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ವತಿಯಿಂದ ನಡೆದ ಗ್ರಾಮ ವ್ಯಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಫೆಬ್ರವರಿಯಿಂದ ಪ್ರತೀ ತಿಂಗಳ 3ನೇ ಶನಿವಾರ ಪ್ರತಿ ಪಂ. ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಅಥವಾ ತಹಸೀಲ್ದಾರ್ ಮುಖಾಂತರ ಗ್ರಾಮ ವಾಸ್ತವ್ಯ ನಡೆಸಲಾಗುವುದು. ಸಾಧ್ಯವಿದ್ದರೆ ಗ್ರಾಮಸ್ಥರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿ, ಹೊಸ ಆಯಾಮ ಕಲ್ಪಿಸಲಾಗುವುದು.
ಪೌತಿ ಖಾತೆ ಬದಲಾವಣೆ, 94ಸಿಸಿ ಅರ್ಜಿ ವಿಲೇವಾರಿ, ಪಹಣಿ ಒಟ್ಟುಗೂಡಿಸುವುದು, ಕಲಂ 3 ಮತ್ತು 9 ಸರಿಪಡಿಸುವುದು, ಪಿಎಂ ಕಿಸಾನ್ ಯೋಜನೆ ದಾಖಲು, ಮಾಸಾಶನ, ಪಿಂಚಣಿ ಮಂಜೂರು ಆದೇಶ- ಸಮಸ್ಯೆಗಳ ಪರಿಹಾರ, ಭೂ ದಾಖಲೆಗಳ ಸಮಸ್ಯೆ ಪರಿಹಾರ, ಮತದಾರರ ಪಟ್ಟಿ ಸೇರ್ಪಡೆ ತಿದ್ದುಪಡಿ ಮತ್ತಿತರ ಯೋಜನೆ ಬಗ್ಗೆ ತಿಳಿವಳಿಕೆ, ಸಮಸ್ಯೆಗೆ ಸೂಕ್ತ ಪರಿಹಾರ ಈ ಸಂದರ್ಭ ನೀಡಲಾಗುವುದು ಎಂದರು.
ಕೃಷಿ, ತೋಟಗಾರಿಕೆ, ಆರೋಗ್ಯ, ಆಹಾರ, ಸಮಾಜ ಕಲ್ಯಾಣ, ಮತ್ತಿತರ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಆಯಾ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹಾಗೂ ಮಾಹಿತಿ ನೀಡಿದರು.ಅರ್ಹ ಫಲಾನುಬಾವಿಗಳಿಗೆ ಈ ಸಂದರ್ಭ ಪಿಂಚಣಿ ಪತ್ರ ವಿತರಿಸಲಾಯಿತು.ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ಪೂಂಜ, ಉಪಾಧ್ಯಕ್ಷ ಆನಂದ, ಸರ್ವೆ ಸೂಪರ್ ವೈಸರ್ ರೂಪಕಲಾ ಶೆಟ್ಟಿ, ಮುಲ್ಕಿ ಉಪತಹಸೀಲ್ದಾರ್ ಬಾಲಚಂದ್ರ, ಮುಲ್ಕಿ ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ ಬಷೀರ್, ಸರ್ವೆಯರ್ ಮಧುಕರ್, ಕಂದಾಯ ನಿರೀಕ್ಷಕ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
20/02/2021 03:37 pm