ಮಂಗಳೂರು: ಉಕ್ರೇನ್‌ನಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಶೆಲ್ ಬಾಂಬ್ ದಾಳಿಗೆ ಮೃತನಾಗಿರುವುದು ಬೇಸರದ ವಿಚಾರ.
ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕೊಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ 18 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಇರುವುದಾಗಿ ಮಾಹಿತಿ ಸಿಕ್ಕಿದೆ. ಈಗಾಗಲೇ ನಾಲ್ಕೈದು ವಿದ್ಯಾರ್ಥಿಗಳು ಪಕ್ಕದ ದೇಶಗಳನ್ನು ತಲುಪಿದ್ದು, ಅವರನ್ನು ವಾಪಸ್ ಕರೆತರಲಾಗುತ್ತಿದೆ ಎಂದರು.
ಎಲ್ಲ ವಿದ್ಯಾರ್ಥಿಗಳ ಪಾಲಕರ ಜೊತೆಗೆ ಮಾತನಾಡುತ್ತಿದ್ದೇನೆ. ವಿದ್ಯಾರ್ಥಿಗಳ ಜೊತೆಗೂ ನಿರಂತರ ಸಂಪರ್ಕದಲ್ಲಿದ್ದೇವೆ. ಇದಕ್ಕಾಗಿ ಬಿಜೆಪಿಯಿಂದ ಪ್ರತ್ಯೇಕ ವಾರ್ ರೂಂ ಆರಂಭಿಸಲಾಗಿದೆ. ಶಾಸಕ ವೇದವ್ಯಾಸ ಕಾಮತ್ ಅವರು ವಿದ್ಯಾರ್ಥಿಗಳ ಜೊತೆಗೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದಾರೆ. ವಿದೇಶಾಂಗ ಸಚಿವಾಲಯದ ಜೊತೆಗೂ ಸಂಪರ್ಕ ಹೊಂದಿದ್ದು, ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಈ ಕಾರ್ಯಕ್ಕಾಗಿ ನಾಲ್ವರು ಕೇಂದ್ರ ಸಚಿವರನ್ನು ನಿಯೋಜಿಸಿದೆ. ಈ ಸಚಿವರು ಉಕ್ರೇನ್ ನ ನೆರೆ ದೇಶಗಳಿಗೆ ತೆರಳಿ,ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರುವ ಕೆಲಸ ಮಾಡುತ್ತಿದ್ದಾರೆ. ಹಾವೇರಿಯ ವಿದ್ಯಾರ್ಥಿ ನವೀನ ಉಕ್ರೇನ್‌ನಲ್ಲಿ ಮೃತಪಟ್ಟಿರುವುದು ದುಃಖದ ಸಂಗತಿ. ಅವರ ಪಾಲಕರ ಜೊತೆಗೂ ಮಾತನಾಡಿ, ಸಾಂತ್ವನ ಹೇಳಲಾಗಿದೆ. ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದರು.
PublicNext
02/03/2022 04:18 pm