ಬಜಪೆ:ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಹೊರಡುವಂತಹ ಆರು ದಶಾವತಾರ ಯಕ್ಷ ಗಾನ ಮೇಳಗಳು ತಿರುಗಾಟವನ್ನು ಮುಗಿಸಿವೆ.
ಬುಧವಾರ ರಾತ್ರಿ ದೇವಸ್ಥಾನದ ರಥಬೀದಿಯಲ್ಲಿ ಏಕಕಾಲದಲ್ಲಿ ಆರು ರಂಗಸ್ಥಳಗಳಲ್ಲಿ( ಪತ್ತನಾಜೆ)ಯ ಸೇವೆಯಾಟ ನಡೆಸುವುದರೊಂದಿಗೆ ವರ್ಷದ ತಿರುಗಾಟ ಸಂಪನ್ನಗೊಂಡಿತು.
ರಾತ್ರಿ ಯಕ್ಷಗಾನದ ಆರು ಮೇಳಗಳ ಚೌಕಿಯಲ್ಲಿ ಏಕಕಾಲದಲ್ಲಿ ಶ್ರೀದೇವರ ಚೌಕಿ ಪೂಜೆಯು ನಡೆಯಿತು.ಚೌಕಿ ಪೂಜೆ ನಡೆದ ಬಳಿಕ ಆರು ಮೇಳಗಳ ರಂಗಸ್ಥಳಗಳಲ್ಲಿ ಏಕಕಾಲದಲ್ಲಿ ಯಕ್ಷಗಾನವು ಆರಂಭಗೊಂಡಿತು.
ಪತ್ತನಾಜೆ ಬಂತೆಂದರೆ ಯಕ್ಷ ಗಾನ ಮೇಳಗಳ ತಿರುಗಾಟಕ್ಕೆ ಮುಂದಿನ ಆರು ತಿಂಗಳ ಅವಧಿಗೆ ಸಾಂಪ್ರದಾಯಿಕ ತೆರೆ ಬೀಳುತ್ತದೆ. ಸೇವೆಯಾಟದ ಅಂಗವಾಗಿ ದಶಾವತಾರ - ಶ್ರೀ ನಿವಾಸ ಕಲ್ಯಾಣ ಎಂಬ ಯಕ್ಷಗಾನವು ನಡೆಯಿತು.ಇಂದು ಬೆಳಿಗ್ಗೆ ಮಂಗಳದ ಬಳಿಕ ದೇವಸ್ಥಾನದ ಒಳಾಂಗಣದಲ್ಲಿ ಆರು ಯಕ್ಷಗಾನ ಮೇಳಗಳ 12 ಮಂದಿ ಕಲಾವಿದರು ಹಿಮ್ಮೇಳ ಸಹಿತ ನಾಟ್ಯ ಸೇವೆಯನ್ನು ಮಾಡಿ ನಂತರ ಪ್ರದಕ್ಷಿಣೆ ಗೈದು ಶ್ರೀ ದೇವರ ಎದುರು ಗೆಜ್ಜೆ ಬಿಚ್ಚುವ ಮೂಲಕ ಕಲಾವಿದರ ಮೇಳದ ತಿರುಗಾಟಕ್ಕೆ ತೆರೆ ಕಾಣುತ್ತದೆ.
ನಿನ್ನೆರಾತ್ರಿ ನಡೆದ ಯಕ್ಷಗಾನ ಸೇವೆಯಾಟದ ಸಂದರ್ಭದಲ್ಲಿ ಸಾವಿರಾರು ಭಕ್ತರು,ಯಕ್ಷಾಭಿಮಾನಿಗಳು,ಗಣ್ಯಾತೀಗಣ್ಯರು ,ಮೇಳಗಳ ಪ್ರಮುಖರು,ದೇವಳದ ಆರ್ಚಕ ವೃಂದ ಹಾಗೂ ಮತ್ತಿತರರು ಪಾಲ್ಗೊಂಡು ಯಕ್ಷಗಾನವನ್ನು ವೀಕ್ಷಿಸಿದರು.
Kshetra Samachara
26/05/2022 10:23 am