ಮಂಗಳೂರು: ಧ್ವನಿವರ್ಧಕ ಬಳಕೆ ಬಗ್ಗೆ ಸರ್ಕಾರವೊಂದು ಗೈಡ್ ಲೈನ್ಸ್ ತಂದಿದೆ. ರಾತ್ರಿ 10 ರಿಂದ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆ ಬಗ್ಗೆ ಹೊಸ ಆದೇಶವನ್ನು ಸರಕಾರ ನೀಡಿದ್ದು ಈ ಆದೇಶದಲ್ಲಿ ಮಾರ್ಪಾಟು ಮಾಡಬೇಕೆಂದು ಕಲಾವಿದರ ಪರವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಅಧ್ಯಕ್ಷ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಮನವಿ ಮಾಡಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಅನೇಕ ಯಕ್ಷಗಾನ ತಂಡಗಳು, ನಾಟಕ ತಂಡಗಳು ಇವೆ. ಇದಕ್ಕೆ ಧರ್ಮದ ಬಂಧವಿಲ್ಲ. ಹಿಂದೂ ಧರ್ಮೀಯರ ಜೊತೆಗೆ ಮುಸ್ಲಿಮರು, ಕ್ರೈಸ್ತರು ಯಕ್ಷಗಾನ ಮಾಡ್ತಾರೆ, ನೋಡ್ತಾರೆ. ಯಕ್ಷಗಾನ, ನಾಟಕ ಪ್ರದರ್ಶನವು ರಾತ್ರಿ ವೇಳೆ ನಡೆಯುತ್ತದೆ. ಈ ಕ್ಷೇತ್ರದಲ್ಲಿ ಪ್ರತಿಭಾವಂತ ಕಲಾವಿದರಿದ್ದಾರೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಅಂತ ಅವರು ಆಗ್ರಹಿಸಿದರು.
ಕೊರೊನಾದ ಕಾಲದಲ್ಲಿ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದವರು ಯಕ್ಷಗಾನ, ನಾಟಕ ಕಲಾವಿದರು. ಈಗ ಅವರ ಬದುಕು ಸ್ವಲ್ಪ ಸಹಜ ಸ್ಥಿತಿಗೆ ಬರ್ತಾ ಇದೆ. ಯಕ್ಷಗಾನವನ್ನು ನಂಬಿ ಬದುಕುತ್ತಿರುವ ಅನೇಕ ಮಂದಿ ಕಲಾವಿದರಿದ್ದಾರೆ. ಸರ್ಕಾರ ಈಗ ಧ್ವನಿವರ್ಧಕಗಳ ಬಳಕೆಯಲ್ಲಿ ಡಿಸೆಬಲ್ ಕುರಿತು ಏನು ಹೇಳಿದೆಯೋ ಅದರಿಂದ ನಾಟಕ, ಯಕ್ಷಗಾನ ಮಾಡಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಕೂಡಲೇ ಸಂಬಂಧಪಟ್ಟ ಶಾಸಕರು, ಸಚಿವರು, ಧಾರ್ಮಿಕ ಮುಖಂಡರು ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು. ಕಲಾವಿದರ ಹಿತದೃಷ್ಟಿಯಿಂದ ಪ್ರತ್ಯೇಕ ನಿಯಮವನ್ನು ತರಬೇಕೆಂದು ಅವರು ಆಗ್ರಹಿಸಿದರು.
PublicNext
15/05/2022 11:05 am