ವಿಶೇಷ ವರದಿ: ರಹೀಂ ಉಜಿರೆ
ಕೋಟ: ಕಾಲೇಜಿನಲ್ಲಿ ಉತ್ತಮ ಪರಿಸರ ,ಸುಸಂಸ್ಕೃತ ಅಧ್ಯಾಪಕ ವೃಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು.ಇವಿಷ್ಟಿದ್ದರೆ ಅಲ್ಲಿಯ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಕೋಟದ ವಿವೇಕ ಪದವಿಪೂರ್ವ ಕಾಲೇಜು.
ಮೊನ್ನೆ ಪ್ರಕಟಗೊಂಡ ಪಿಯುಸಿ ಫಲಿತಾಂಶದಲ್ಲಿ ಈ ಕಾಲೇಜು ಅಪೂರ್ವ ಸಾಧನೆ ತೋರಿದೆ.73 ವರ್ಷ ಇತಿಹಾಸವಿರುವ ವಿವೇಕ ಕಾಲೇಜಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದು ಗಮನಾರ್ಹ.ವಿದ್ಯಾರ್ಥಿಗಳೇ ರೂಪಿಸಿದ ಗಾರ್ಡನ್ ,ಸೈನ್ಸ್ ಪಾರ್ಕ್ ,ಉತ್ತಮ ಆಟದ ಮೈದಾನ ಇವೆಲ್ಲ ಇಲ್ಲಿನ ವಿದ್ಯಾರ್ಥಿಗಳನ್ನು ಸುಸಂಸ್ಕೃತ ವಿದ್ಯಾರ್ಥಿಗಳನ್ನಾಗಿ ರೂಪಿಸಲು ಕಾರಣವಾಗಿವೆ.
ಕಲಿಕೆಗೆ ಇಲ್ಲಿ ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿಗತಿ ಎಂದೂ ಅಡ್ಡಿಯಾಗಿಲ್ಲ. ಈ ಬಾರಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆದ 635 ವಿದ್ಯಾರ್ಥಿಗಳ ಪೈಕಿ 615 ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ 97 ಶೇ. ಫಲಿತಾಂಶವನ್ನು ಪಡೆದ ಹೆಮ್ಮೆ ಈ ವಿದ್ಯಾಸಂಸ್ಥೆಯದು. ವಿಜ್ಞಾನ ವಿಭಾಗದಲ್ಲಿ ಶೇಕಡ.97.65 ವಾಣಿಜ್ಯ ವಿಭಾಗದಲ್ಲಿ 96.92 ಶೇಕಡ ಮತ್ತು ಕಲಾವಿಭಾಗದಲ್ಲಿ ಶೇಕಡ 90 .70 ಫಲಿತಾಂಶ ಬಂದಿದೆ.
ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳಲ್ಲಿ 296 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಕಾಲೇಜಿನ ಹೆಗ್ಗಳಿಕೆ. ವಿಜ್ಞಾನ ವಿಭಾಗದಲ್ಲಿ ಶ್ರೇಯಾ ಆಚಾರ್ ಗರಿಷ್ಟ 593 ಅಂಕ ಗಳಿಸಿದ್ದು, ವಾಣಿಜ್ಯ ವಿಭಾಗದಲ್ಲಿ ಸುಶ್ಮಿತ ಎಸ್ .ಗಾಣಿಗ 592 ಗರಿಷ್ಟ ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಫಾತಿಮಾ 578 ಗರಿಷ್ಟ ಅಂಕ ಗಳಿಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಉತ್ಕೃಷ್ಟ ಗುಣಮಟ್ಟದ ಕಾರಣದಿಂದ ವಿವೇಕ ಪದವಿಪೂರ್ವ ಕಾಲೇಜಿನಲ್ಲೇ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಲಕ್ಷಾಂತರ ಫೀಸ್ ಇರುವ ಕಾಲೇಜುಗಳ ಮಧ್ಯೆ ಇಲ್ಲಿ ಕೆಲವೇ ಸಾವಿರ ಶುಲ್ಕ ಪಡೆಯಲಾಗಿತ್ತದೆ. ಜೊತೆಗೆ ದುಬಾರಿ ಟ್ಯೂಷನ್ ಕಾಟದಿಂದ ಈ ಕಾಲೇಜು ಮುಕ್ತ.ಪ್ರಾಂಶುಪಾಲ ಜಗದೀಶ ನಾವಡ ನೇತೃತ್ವದ ಅಧ್ಯಾಪಕ ವೃಂದದಿಂದಾಗಿ ಕಾಲೇಜು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಈ ವಿದ್ಯಾದೇಗುಲ ಗ್ರಾಮೀಣ ಮಕ್ಕಳಿಗೆ ಇನ್ನಷ್ಟು ವಿದ್ಯೆ ದಯಪಾಲಿಸಲಿ ಎಂದು ಹಾರೈಸೋಣ.
PublicNext
20/06/2022 07:05 pm