ಮುಲ್ಕಿ: ಮುಲ್ಕಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಾನಿಗಳ ನೆರವಿನಿಂದ ನವೀಕೃತ ಪ್ರಯೋಗಶಾಲೆ, ಶಾಲಾ ಕೊಠಡಿಗೆ ವಿದ್ಯುತ್ ಉಪಕರಣಗಳು ಹಾಗೂ, ಕುಡಿಯುವ ನೀರಿನ ವ್ಯವಸ್ಥೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಶಾಲಾ ಹಳೆವಿದ್ಯಾರ್ಥಿ ಹಾಗೂ ದಾನಿ ಶಮಿನಾ ಆಳ್ವಾ ಮಾತನಾಡಿ ಸರಕಾರಿ ಶಾಲೆಗಳ ಬಗ್ಗೆ ತಾತ್ಸಾರ ಸಲ್ಲದು, ಶತಮಾನ ಕಂಡ ಮುಲ್ಕಿ ಸರಕಾರಿ ಶಾಲೆ ಇತ್ತೀಚಿನ ದಿನಗಳಲ್ಲಿ ಸರಕಾರದ ಮೂಲಭೂತ ಸೌಕರ್ಯ, ಹಳೆ ವಿದ್ಯಾರ್ಥಿ ಸಂಘ ಹಾಗೂ ದಾನಿಗಳಿಂದ ಅಭಿವೃದ್ಧಿ ಹೊಂದುತ್ತಿದ್ದು ವಿದ್ಯಾರ್ಥಿಗಳು ಉತ್ತಮ ವಿದ್ಯೆ ಕಲಿತು ರಾಷ್ಟ್ರಕ್ಕೆ ಮಾದರಿಯಾಗಿ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಅಚ್ಚುತ ಕುಡ್ವ, ಉದ್ಯಮಿ ಮುರಳಿಧರ ಭಂಡಾರಿ,ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರ್ಷರಾಜಶೆಟ್ಟಿ, ಉದ್ಯಮಿ ಹರೀಶ್ ಪುತ್ರನ್, ಎಸ್ ವಿಟಿ ಟೆಂಪಲ್ ಟ್ರಸ್ಟಿ ನರಸಿಂಹ ಪೈ, ನಿವೃತ್ತ ಶಿಕ್ಷಕಿ ಶಾಂತ ಕಾಲೇಜು ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜು ಅಭಿವೃದ್ಧಿಗೆ ಶ್ರಮಿಸಿದ ದಾನಿಗಳಾದ ಉದ್ಯಮಿ ಎಂ ಬಿ ಖಾನ್ ಕಾರ್ನಾಡ್, ವಿಠ್ಠಲ್ ಕಾಮತ್, ಶಮೀನಾ ಆಳ್ವಾರನ್ನು ಗೌರವಿಸಲಾಯಿತು. ಇತ್ತೀಚಿಗೆ ನಿಧನರಾದ ಶಾಲಾ ನಿವೃತ್ತ ಶಿಕ್ಷಕ ಗಿರಿಯಪ್ಪ ಮಾಸ್ಟರ್ ರವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಉಪನ್ಯಾಸಕಿ ಡಾ. ಬಿ ಎಸ್ ರೇಖಾ ನಿರೂಪಿಸಿದರು, ರಮಾನಂದ ಧನ್ಯವಾದ ಅರ್ಪಿಸಿದರು.
Kshetra Samachara
10/01/2022 06:13 pm