ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಲ್ಕೆಮಾರ್ ಶಾಲೆಗೆ ಭೇಟಿ ನೀಡಿದ ಅಕ್ಷರ ಸಂತ, ಪದ್ಮಶ್ರೀ ಹರೇಕಳ ಹಾಜಬ್ಬ

ಬಂಟ್ವಾಳ: ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಕೆಮಾರ್ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ಬುಧವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭ ಹಾಜಬ್ಬ ಅವರನ್ನು ಶಾಲಾಭಿವೃದ್ಧಿ ಸಮಿತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ಅಭ್ಯುದಯ ಎಂಬ ಚಿಣ್ಣರ ಮಾಸಿಕದ ಸಂಚಿಕೆಯನ್ನು ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಹಾಜಬ್ಬ, ಬರವಣಿಗೆ ಗೊತ್ತಿಲ್ಲದ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ತಾನು ಮಕ್ಕಳಿಗೋಸ್ಕರ ಶಾಲೆಯನ್ನು ನಿರ್ಮಿಸುವ ಕನಸು ಹೊತ್ತಿದ್ದೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳು ಸಹಕಾರ ನೀಡಿದವು. ಶಾಲೆ, ಹೈಸ್ಕೂಲು ನಿರ್ಮಾಣಕ್ಕೆ ದಾನಿಗಳ ನೆರವು ಬಂದವು. ಇದಕ್ಕೆಲ್ಲಾ ಮಾಧ್ಯಮಗಳ ಸಹಕಾರವೂ ಕಾರಣ ಎಂದು ಶಾಲೆಗಾಗಿ ಪಟ್ಟ ಶ್ರಮದ ಕುರಿತು ವಿವರಿಸಿದರು.

ಹಾಜಬ್ಬ ಅವರನ್ನು ಅಭಿನಂದಿಸಿ ಮಾತನಾಡಿದ ಸೂರ್ಯವಂಶ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಡಾ. ಗೋವರ್ಧನ ರಾವ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದರೂ ಜನಸಾಮಾನ್ಯರಾಗಿಯೇ ಸರಳ ಜೀವನ ನಡೆಸುವ ಮುಗ್ಧ ವ್ಯಕ್ತಿತ್ವದ ಹಾಜಬ್ಬ ಅವರನ್ನು ಗೌರವಿಸುವುದು ನಮ್ಮೆಲ್ಲರಿಗೂ ಹೆಮ್ಮೆ ಎಂದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವಿಜಯ್ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಯೋಗೀಶ್, ಸ್ಥಳದಾನಿ ರಾಮಪ್ಪ ಪೂಜಾರಿ, ಎಸ್ ಡಿಎಂಸಿ ಉಪಾಧ್ಯಕ್ಷ ನಾರಾಯಣ, ಸದಸ್ಯರಾದ ಯಾದವ್ ಅಗ್ರಬೈಲ್, ಗ್ರಾ.ಪಂ.ಸದಸ್ಯರಾದ ಭಾರತೀ ಚೌಟ, ಚಂದ್ರಾವತಿ, ಪ್ರಕಾಶ್ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಜ್ಯೋತಿ ಕುಮಾರಿ ಸ್ವಾಗತಿಸಿದರು. ಶಿಕ್ಷಕಿ ರೇಖಾ ಬಿ.ಸಿ. ಕಾರ್ಯಕ್ರಮ ನಿರ್ವಹಿಸಿದರು. ಮೋಹಿನಿ ವಂದಿಸಿದರು. ಶಶಿಕಲಾ ಅವರು ಹಾಜಬ್ಬ ಅವರನ್ನು ಪರಿಚಯಿಸಿದರು. ಜಗನ್ನಾಥ್ ಸಹಕರಿಸಿದರು.

Edited By : PublicNext Desk
Kshetra Samachara

Kshetra Samachara

16/12/2021 04:09 pm

Cinque Terre

5.09 K

Cinque Terre

0