ಬಜಪೆ: ಎಂ.ಆರ್.ಪಿ.ಎಲ್. ನ ಸಿಎಸ್ಆರ್ ಅನುದಾನ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕುಪ್ಪೆಪದವು ಕಿಲೆಂಜಾರು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟಿಸಿದರು.
ನಂತರ ಮಾತನಾಡಿದ ಶಾಸಕರು, ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಬದಲಾವಣೆ ಆಗಲಿದೆ. ಶಿಕ್ಷಣ ವ್ಯವಹರಿಕವಾದ ನಂತರದಲ್ಲಿ ಮೌಲ್ಯಗಳು ಬೆಲೆ ಕಳೆದುಕೊಂಡಿವೆ ಗುರುಗಳನ್ನು ಗೌರವಿಸುವ ಮನೋಭಾವ ಕಡಿಮೆಯಾಗಿದೆ ಎಂದರು.
ಅಂಗನವಾಡಿಯಿಂದ ಪದವಿವರೆಗೆ ಅನ್ವಯವಾಗುವ ಹೊಸ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿ ಆಸಕ್ತಿಗನುಗುಣವಾಗಿ ಬಹು ಆಯ್ಕೆ ಮತ್ತು ಬದಲಾವಣೆ ಮಾಡುವ ಅವಕಾಶ ಸಿಗಲಿದ್ದು, ಶಿಕ್ಷಕರ ಅಗತ್ಯ ಸೌಲಭಗಳ ಬಗ್ಗೆಯೂ ಬದಲಾವಣೆ ಆಗಲಿದೆ ಎಂದು ತಿಳಿಸಿದರು.
ಶಾಲಾ ಕಟ್ಟಡಕ್ಕೆ ಅನುದಾನ ಒದಗಿಸಿದ ಎಂ.ಆರ್.ಪಿ.ಎಲ್ ಸಿಎಸ್ಆರ್ ವಿಭಾಗದ ಜನರಲ್ ಮ್ಯಾನೇಜರ್ ಮಾಲತೇಶ್ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಶ್ರಮಿಸಿದವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜನಾರ್ಧನ ಗೌಡ, ಕುಪ್ಪೆಪದವು ಪಂಚಾಯತ್ ಅಧ್ಯಕ್ಷ ಡಿ.ಪಿ. ಹಮ್ಮಬ್ಬ, ಪಿಡಿಓ ಸವಿತಾ ಮಂದೋಲಿಕರ, ನಿವೃತ್ತ ಮುಖ್ಯೋಪಾಧ್ಯಾಯ ಅಣ್ಣಯ್ಯ ಎಂ., ಪಂಚಾಯತ್ ಸದಸ್ಯರುಗಳು,ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.
Kshetra Samachara
27/10/2021 09:25 pm