ಉಡುಪಿ: ಇಂದು ಟಿವಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಮಕ್ಕಳ ಪ್ರತಿಭೆಗೆ ಹೆಚ್ಚಿನ ಅವಕಾಶ ಸಿಗುತ್ತಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದರೆ ದೇಶಕ್ಕೆ ಶ್ರೇಷ್ಠ ಸಾಧಕನನ್ನು ನೀಡಿದಂತಾಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಶಿವರಾಮ ಶೆಟ್ಟಿ ತಲ್ಲೂರು ಹೇಳಿದರು.
ಅವರು ಉಡುಪಿಯ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ಹಮ್ಮಿಕೊಂಡ ಕರ್ನಾಟಕ ಮಕ್ಕಳ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲ. ಆದರೆ ಕಲಿಯಬೇಕು ಎನ್ನುವ ಛಲ, ಆಸಕ್ತಿ ಇದ್ದರೆ ಹೆಚ್ಚಿನದ್ದನ್ನು ಸಾಧಿಸಬಹುದು.
ಪ್ರತಿ ಮಗುವಿನಲ್ಲಿ ಆತ್ಮ ವಿಶ್ವಾಸ ಬೆಳೆಸಬೇಕು ಎಂದ ಅವರು, 60ರ ಹರೆಯದಲ್ಲಿ ತಾನು ಯಕ್ಷಗಾನ ಕಲಿತು ಸಮರ್ಥ ಯಕ್ಷಗಾನ ಕಲಾವಿದನಾದ ಬಗ್ಗೆ ವಿವರಿಸಿದರು.
ಪುನರೂರು ಕ್ಷೇತ್ರದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಮಕ್ಕಳ ಕನ್ನಡ ಓದು ಬರಹಕ್ಕೆ ಮನ್ನಣೆ ಕೊಡದಿದ್ದರೆ ಕನ್ನಡ ಶಾಲೆಗಳು ಉಳಿಯುವುದಿಲ್ಲ ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು ಮಾತನಾಡಿ, ಮಕ್ಕಳಲ್ಲಿ ಸೃಜನಾತ್ಮಕ ಬೆಳವಣಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಆಕಾಶ್‌ರಾಜ್ ಜೈನ್, ಸಂಧ್ಯಾಶೆಣೈ, ಸಮ್ಮೇಳನಾಧ್ಯಕ್ಷೆ ಅದ್ವಿಕಾ ಶೆಟ್ಟಿ, ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಉಡುಪಿ ಮಲಬಾರ್ ಗೋಲ್ಡ್ ವ್ಯವಸ್ಥಾಪಕ ಹಫೀಜ್ ರೆಹಮಾನ್, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ರಾಜ್ಯಾಧ್ಯಕ್ಷ ಡಾ.ಶೇಖರ್ ಅಜೆಕಾರು, ಉದ್ಯಮಿ ಆರ್.ಜಿ.ಶೆಟ್ಟಿ ಮುಂಬೈ, ನರಸಿಂಹಮೂರ್ತಿ ಮಣಿಪಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ, ಯಕ್ಷ ನೃತ್ಯ ವೈಭವ, ರೂಪಾ ವಸುಂಧರ ಆಚಾರ್ಯ ಪಡುಬಿದ್ರೆ ಇವರಿಂದ ಏಕವ್ಯಕ್ತಿ ಚಿತ್ರಕಲಾ `ಪುಷ್ಪಾಂಜಲಿ' ಪ್ರದರ್ಶನ, ಡ್ರಾಮಾ ಜೂನಿಯರ್ ಸೀಸನ್ 4 ರ ವಿಜೇತರಿಗೆ ಗೌರವಾರ್ಪಣೆ ನಡೆಯಿತು.
Kshetra Samachara
08/09/2022 01:17 pm