ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 2020-21ನೆ ಸಾಲಿನ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ(ಎಂಎಲ್‌ಐಎಸ್‌ಸಿ) ಮತ್ತು ವಸ್ತು ವಿಜ್ಞಾನ ಸ್ನಾತಕೋತ್ತರ ಪದವಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಉಡುಪಿಯಲ್ಲಿ ಈ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಂಗಳೂರು ವಿವಿಯ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಅಧ್ಯಕ್ಷ ಡಾ.ಡಿ.ಶಿವಲಿಂಗಯ್ಯ, ಯಾವುದೇ ಪದವಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಎಂಎಲ್‌ಐಎಸ್‌ಸಿ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಬಹುದು. ಈ ವಿಭಾಗದಲ್ಲಿ ಸುಸಜ್ಜಿತ ಗಣಕಯಂತ್ರ ಪ್ರಯೋಗಾಲಯವನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ವೈಫೈ ಮತ್ತು ಅಂತರ್ಜಾಲದ ಸೌಲಭ್ಯವಿದೆ. ನ.21 ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಆಗಿದೆ ಎಂದರು.
ಈ ವೃತ್ತಿಪರ ಕೋರ್ಸ್‌ನಲ್ಲಿ ಗರಿಷ್ಠ ಪ್ರಮಾಣದ ಉದ್ಯೋಗಾವಕಾಶಗಳಿವೆ. ಪರಿಷ್ಕೃತ ಮತ್ತು ನವೀಕರಿಸಿದ ಪಠ್ಯ ಕ್ರಮವನ್ನು ಒಳಗೊಂಡಿದೆ. ಎಂಎಲ್‌ಐ ಎಸ್‌ಸಿ ಸ್ನಾತಕೋತ್ತರ ಪದವಿ ಪಡೆದವರು ಯುಜಿಸಿ ನೆಟ್, ಎಸ್‌ಎಲ್‌ಇಟಿ, ಜೆಆರ್‌ಎಫ್ ಪರೀಕ್ಷೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಅವರು ತಿಳಿಸಿದರು.
ಮಂಗಳೂರು ವಿವಿ ವಸ್ತು ವಿಜ್ಞಾನದ ವಿಭಾಗದ ಮುಖ್ಯಸ್ಥ ಮಂಜುನಾಥ್ ಮಾತನಾಡಿ, ಬಿಎಸ್‌ಸಿ ಪದವಿಯಲ್ಲಿ ಭೌತಶಾಸ್ತ್ರವನ್ನು ಮುಖ್ಯ ವಿಷಯವಾಗಿ ಅಧ್ಯಯನ ಮಾಡಿರುವ ಅರ್ಹ ಪದವೀಧರರಿಂದ ವಸ್ತು ವಿಜ್ಞಾನ ಸ್ನಾತಕೋತ್ತರ ಪದವಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇಂದಿನ ಅಂತರಿಕ್ಷ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನಗಳು ವಸ್ತು ವಿಜ್ಞಾನದ ತಳಹದಿಯ ಮೇಲೆ ರೂಪಿತ ಗೊಂಡಿದ್ದು, ಇದರಿಂದ ವಸ್ತು ವಿಜ್ಞಾನವು ಇಂದಿನ ತಂತ್ರಜ್ಞಾನ ಯುಗಕ್ಕೆ ಅತ್ಯಂತ ಅವಶ್ಯಕವಾದ ವಿಷಯವಾಗಿದೆ ಎಂದರು.
Kshetra Samachara
10/11/2020 05:58 pm