ಕಾರ್ಕಳ: ಕಾರ್ಕಳ ತಾಲೂಕಿನ ಕೈಯಾರ್ಲದ ಶ್ರೀಮಹಾಕಾಳಿ ದೇವಾಲಯದ ಸಮೀಪದ ನಾಗಬನದಲ್ಲಿ ಪುರಾತನ ನಾಗಭೈರವ ಶಿಲ್ಪ ಪತ್ತೆಯಾಗಿದೆ ಎಂದು ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಆಯತಾಕಾರದ ಬಳಪದ ಶಿಲೆಯ ಕೆಳಭಾಗದಲ್ಲಿ ಕಾಲುಮಂಡಲದ ನಾಲ್ಕು ಪತ್ರ ಗಂಟುಗಳನ್ನು ಒಳಗೊಂಡ ಒಂದು ನಾಗರಾಜನ ಶಿಲ್ಪವನ್ನು ರಚಿಸಲಾಗಿದ್ದು, ನಾಗನ ಹೆಡೆಯ ಮೇಲೆ ಚರ್ತುಬಾಹು ನಾಗಭೈರನ ಶಿಲ್ಪವನ್ನು ನಿಂತಂತೆ ರಚಿಸಲಾಗಿದೆ. ಹಿಂದಿನ ಎರಡು ಕೈಗಳಲ್ಲಿ ಎರಡು ಹೆಡೆಬಿಚ್ಚಿದ ನಾಗಗಳನ್ನು ಹಿಡಿದಂತೆ ಚಿತ್ರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಬಲಗೈಯಲ್ಲಿ ನಾಗ ದಂಡವಿದೆ. ಎಡಗೈಯಲ್ಲಿ ರುಂಡವಿದೆ. ನಾಗಭೈರವ ಶಿಲ್ಪದ ಎಡ-ಬಲಗಳಲ್ಲಿ ಹೆಡೆಬಿಚ್ಚಿದ ನಾಗಗಳನ್ನು ಕೈಯಲ್ಲಿ ಹಿಡಿದ ನಾಗ ಕನ್ನಿಕೆಯರ ಶಿಲ್ಪಗಳಿವೆ. ನಾಗಭೈರವನ ತಲೆಯ ಮೇಲೆ ಐದು ಹೆಡೆಗಳ ನಾಗಕೊಡೆಯಿದೆ. ಜನಿವಾರ ಮತ್ತು ಸೊಂಟದ ಕೆಳಗೆ ಅರೆಪಂಚೆಯ ಅಲಂಕಾರವಿದೆ ಎಂದವರು ವಿವರಿಸಿದ್ದಾರೆ.
ಶುದ್ಧ ಜನಪದ ಶೈಲಿಯಲ್ಲಿ ರಚಿತವಾಗಿರುವ ಈ ಶಿಲ್ಪ ಸುಮಾರು 14-15ನೇ ಶತಮಾನದ ಜೈನ ನಾಗಶಿಲ್ಪವಾಗಿದೆ. ಈ ಶಿಲ್ಪದ ಅಧ್ಯಯನದಲ್ಲಿ ದೇವಾಲಯದ ಅರ್ಚಕರಾದ ಕಿರಣ್ ಚೌಟ, ಆಡಳಿತಾಧಿಕಾರಿ ಚಂದ್ರಹಾಸ ಚೌಟ, ವಿದ್ಯಾರ್ಥಿಗಳಾದ ಶ್ರೇಯಸ್, ಕಾರ್ತಿಕ್, ಗೌತಮ್, ದಿಶಾಂತ್ ಸಹಕರಿಸಿದ್ದಾರೆ. ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.
Kshetra Samachara
11/10/2022 11:35 am