ಮಂಗಳೂರು: ನಗರದ ರಥಬೀದಿಯ ಪರಿಸರವಿಡೀ ಇಂದು ರಂಗು ತುಂಬಿತ್ತು. ಎಲ್ಲೆಡೆಯೂ ಬಣ್ಣಗಳ ಮೇಲಾಟ, ಪುಟಾಣಿಗಳಿಗೆ ಉತ್ಸಾಹ, ಯುವ ಸಮೂಹದ ಕುಣಿತ, ರಸ್ತೆಪೂರ್ತಿ ಜನಜಂಗುಳಿ ತುಂಬಿ ಸಂಭ್ರಮವೇ ಮನೆ ಮಾಡಿತ್ತು.
ರಥಬೀದಿ ಶ್ರೀ ವೆಂಕಟರಮಣ ದೇವಳದ 'ಕೊಡಿಯಾಲ್ ತೇರು'ವಿನ ಕೊನೆಯ ದಿನವಾದ ಇಂದು (ಅವಭೃತೋತ್ಸವ) ಓಕುಳಿಯಲ್ಲಿ ಈ ದೃಶ್ಯ ಕಂಡು ಬಂತು. ಸೂರ್ಯ ನೆತ್ತಿಗೇರುವ ಹೊತ್ತಿಗಾಗಲೇ ರಥಬೀದಿ ಪೂರ್ತಿ ಜನರಿಂದ ಕಿಕ್ಕಿರಿದಿತ್ತು. ದೊಡ್ಡವರು, ಸಣ್ಣವರು, ವೃದ್ಧರು, ಮಹಿಳೆಯರೆಂದು ಎಲ್ಲರೂ ಓಕುಳಿ ರಂಗಿನಲ್ಲಿ ಮಿಂದೆದ್ದರು. ಪುಟಾಣಿಗಳು ಪಿಚಕಾರಿಯಲ್ಲಿ ಬಣ್ಣ ಮಿಶ್ರಿತ ನೀರು ಎರಚಿ ಸಂಭ್ರಮಿಸಿದರೆ, ಒಂದಿಷ್ಟು ಮಕ್ಕಳು ಅಪ್ಪನ ಹೆಗಲೇರಿ ಬೀದಿ ಸುತ್ತಿದರು.
ಯುವ ಸಮೂಹ ಒಬ್ಬರಿಗೊಬ್ಬರು ಎರಚಿ, ಮೈ-ಮುಖ ಪೂರ್ತಿ ಬಣ್ಣ ಮೆತ್ತಿಸಿಕೊಂಡು ಸಂಭ್ರಮಿಸಿದರು. ಒಂದೆಡೆ ಬ್ಯಾಂಡ್, ತಾಸೆ, ವಾದ್ಯದ ನಾದಕ್ಕೆ ಹುಚ್ಚೆದ್ದು ಕುಣಿಯುವ ಯುವಕರ ಸಂಭ್ರಮ ಮೇರೆ ಮೀರಿತ್ತು. ಜೊತೆಗೆ ಕೆಲ ಹಿರಿಯರೂ ಯುವಕರೊಂದಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು. ರಸ್ತೆ ಇಕ್ಕೆಲದಲ್ಲೂ ಬಣ್ಣದೋಕುಳಿ ಕಣ್ತುಂಬುವ ಮಂದಿ ಸಾಕಷ್ಟಿದ್ದರು.
Kshetra Samachara
20/02/2021 02:56 pm