ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್ ಉಡುಪಿ
ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರು ಹಿಂದೆ ಬಹುದೊಡ್ಡ ವ್ಯಾಪಾರ ಕೇಂದ್ರವಾಗಿತ್ತು. ಅಂದು ಬಸ್ರೂರು ವಸುಪುರವೆಂದು ಕರೆಯಲ್ಪಡುತ್ತಿತ್ತು. ನಂತರ ಬಸ್ರೂರು ಆಯಿತು.
ನೌಕಾಸೇನೆಯೊಂದಿಗೆ ಗೋವೆಯನ್ನು ಬಳಸಿಕೊಂಡು ಬಸ್ರೂರಿಗೆ ಬಂದ ಶಿವಾಜಿ ಮಹಾರಾಜರು, ಎರಡು ದಿನಗಳ ಕಾಲ ಬಸ್ರೂರಿನಲ್ಲಿ ತಂಗಿ, ನಂತರ ಬಂದರನ್ನು ಪೋರ್ಚುಗೀಸರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಿದರು. ಶಿವಾಜಿ ಮಹಾರಾಜರ ಮೊದಲ ನೌಕಾ ವಿಜಯವನ್ನು ಪ್ರತಿವರ್ಷ ಸ್ಮರಿಸಿಕೊಳ್ಳುತ್ತಾರೆ ಬಸ್ರೂರಿನ ಜನರು.
ಮೊದಲು ಕನ್ನಡ ನೆಲದಿಂದಲೇ ಹಿಂದೂ ಸಾಮ್ರಾಜ್ಯ ಕಟ್ಟುವ ಸ್ಫೂರ್ತಿ ಪಡೆದಿದ್ದ ಶಿವಾಜಿ ಮಹಾರಾಜರ ಆ ನೆನಪು ಅಜರಾಮರವಾಗಿ ಇರಿಸಲು ಯುವ ಬ್ರಿಗೇಡ್ ಇದೀಗ ಪಣ ತೊಟ್ಟಿದೆ. ಫೆಬ್ರವರಿ 21ರ ಭಾನುವಾರ ಬಸ್ರೂರಿನಲ್ಲಿ ಸಾವಿರಾರು ಯುವ ಬ್ರಿಗೇಡ್ ಯುವಕರು ಮತ್ತು ಊರಿನ ಜನರು ಸೇರಿ ಅದ್ಧೂರಿ ಕಾರ್ಯಕ್ರಮ ನಡೆಸಲು ಇಂದು ಪೂರ್ವಭಾವಿ ಸಭೆಯನ್ನು ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ನೇತೃತ್ವದಲ್ಲಿ ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು.
ಯುವ ಬ್ರಿಗೇಡ್ ನನ್ನ ಕನಸಿನ ಕರ್ನಾಟಕದ ಸಂಚಾಲಕ ನಿರಂಜನ ಶೆಟ್ಟಿ, ಊರಿನ ಹಿರಿಯರು ಮತ್ತು ಯುವ ಬ್ರಿಗೇಡ್ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ನಡೆಸಿದರು.ಬಸ್ರೂರಿನಲ್ಲಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ಸ್ಥಾಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನಂತರ ಕರ್ನಾಟಕದ ಮೂಲೆಮೂಲೆಗಳಿಂದ ಯುವ ಬ್ರಿಗೇಡ್ ಯುವಕರು ಬೈಕ್ ರ್ಯಾಲಿ ಮೂಲಕ ಬಸ್ರೂರಿಗೆ ಬರಲು ತಯಾರಿ ನಡೆಸಲಾಯಿತು. ವಿಶೇಷ ದೇಶಪ್ರೇಮ ಉದ್ದೀಪನಗೊಳಿಸುವ ಈ ಕಾರ್ಯಕ್ರಮಕ್ಕೆ ಇದೀಗ ತಂಡ ಸಜ್ಜಾಗುತ್ತಿದೆ.
Kshetra Samachara
03/02/2021 12:09 pm