ಮಂಗಳೂರು: ಲಂಚ ಸ್ವೀಕಾರದ ಆರೋಪದಲ್ಲಿ ಬಂಧನಕ್ಕೊಳಗಾದ ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಆತನ ಸಹಾಯಕ ಶಿವಾನಂದ ನಾಟೇಕರ್‌ಗೆ ಜಾಮೀನು ನಿರಾಕರಿಸಿರುವ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ದ.ಕ.ಜಿಲ್ಲಾ ಲೋಕಾಯುಕ್ತ ಪೊಲೀಸರು ಮಂಗಳೂರು ಮಿನಿ ವಿಧಾನಸೌಧಕ್ಕೆ ದಾಳಿ ನಡೆಸಿ ಲಂಚ ಸ್ವೀಕಾರ ಮಾಡುತ್ತಿರುವಾಗಲೇ ಮಂಗಳೂರು ತಹಶೀಲ್ದಾರ್ ಸಹಾಯಕ ಅಧಿಕಾರಿಯನ್ನು ಶುಕ್ರವಾರ ಬಂಧಿಸಿತ್ತು. ಆತನನ್ನು ವಿಚಾರಣೆ ನಡೆಸಿದ ವೇಳೆ ತಾನು ತಹಶೀಲ್ದಾರ್ ಅವರ ಸೂಚನೆಯಂತೆ ಲಂಚ ಸ್ವೀಕಾರ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಆದ್ದರಿಂದ ಲೋಕಾಯುಕ್ತ ಪೊಲೀಸರು ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆಯನ್ನೂ ಬಂಧಿಸಿದ್ದರು.
ಹಿರಿಯ ನಾಗರಿಕರೊಬ್ಬರು ತಮ್ಮ ಜಾಗ ಮಾರಾಟ ಮಾಡುವುದಕ್ಕಾಗಿ ಎನ್ಒಸಿ ಪಡೆಯಲು ಆಗಮಿಸಿದ ವೇಳೆ ಆರೋಪಿ ಶಿವಾನಂದ ನಾಟೆಕರ್ 2,000 ರೂ. ಲಂಚ ಪಡೆದು ಹೆಚ್ಚಿನ 10 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಅವರ ಮನವಿಯಂತೆ 5,000 ರೂ.ಗೆ ಒಪ್ಪಿಗೆ ಸೂಚಿಸಿದ್ದ. ಈ ಬಗ್ಗೆ ಹಿರಿಯ ನಾಗರಿಕರು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದರು. ಅದರಂತೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶಿವಾನಂದ ನಾಟೆಕರ್ ಲಂಚ ಸ್ವೀಕರಿಸುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
Kshetra Samachara
01/10/2022 08:33 pm