ಉಡುಪಿ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಉಡುಪಿ ಕೊಡವೂರು ನಿವಾಸಿ ಕಿರಣ್ (28) ಶಿಕ್ಷೆಗೆ ಗುರಿಯಾದ ಆರೋಪಿ.
16 ವರ್ಷ ವಯಸ್ಸಿನ ಸಂತ್ರಸ್ತ ಬಾಲಕಿ ಶಾಲೆಗೆ ಹೋಗುವಾಗ ಪ್ರೀತಿ-ಪ್ರೇಮದ ನಾಟಕವಾಡಿ ಬಲೆಗೆ ಬೀಳಿಸಿಕೊಂಡ ಕಿರಣ್, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ. ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ವೈರಲ್ ಮಾಡುವುದಾಗಿ ಬೆದರಿಸಿ ಎರಡು ಮೂರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ದೂರಲಾಗಿತ್ತು.
ವಿಚಾರ ತಿಳಿದ ಆರೋಪಿಯ ಸಹೋದರಿ, ಇದನ್ನು ಯಾರಲ್ಲಿಯೂ ಹೇಳದಂತೆ ಬಾಲಕಿಯ ಬಳಿ ಮಾತುಕತೆ ನಡೆಸಿದ್ದಳು. ಮುಂದೆ ಈ ಬಗ್ಗೆ ಸಂತ್ರಸ್ತ ಬಾಲಕಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸರು ಕಿರಣ್ ಹಾಗೂ ಆತನ ಸಹೋದರಿಯನ್ನು ಬಂಧಿಸಿದ್ದರು. ಬಳಿಕ ಅವರಿಬ್ಬರು ಜಾಮೀನು ಪಡೆದಿದ್ದರು. ಅಂದಿನ ಮಹಿಳಾ ಠಾಣಾ ಪೊಲೀಸ್ ನಿರೀಕ್ಷಕಿ ಕಲಾವತಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಒಟ್ಟು 28 ಸಾಕ್ಷಿಗಳಲ್ಲಿ 12 ಸಾಕ್ಷಿ ವಿಚಾರಣೆ ನಡೆದಿದ್ದು ನೊಂದಬಾಲಕಿ ನುಡಿದ ಸಾಕ್ಷಿ, ಸಾಂದರ್ಭಿಕ ಸಾಕ್ಷಿಗಳನ್ನು ಪರಿಗಣಿಸಿ ಕಿರಣ್ ಮೇಲಿನ ಆರೋಪ ಸಾಬೀತಾಗಿದೆಯೆಂದು ಅಭಿಪ್ರಾಯಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಪೋಕ್ಸೊ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಬೆದರಿಕೆ ಹಾಕಿದ್ದಕ್ಕೆ 1 ವರ್ಷ ಜೈಲು, 5 ಸಾವಿರ ದಂಡ ವಿಧಿಸಿದರು.
PublicNext
14/07/2022 11:20 am