ಉಡುಪಿ: ಜಿಲ್ಲೆಯ ವಿವಿಧ ಠಾಣೆಗಳಲ್ಲಿ 2020 ರಿಂದ 2021 ರ ಅಕ್ಟೋಬರ್ ಅಂತ್ಯದವರೆಗೆ ದಾಖಲಾಗಿರುವ 312 ಪ್ರಕರಣ ಭೇದಿಸಿ ಜಪ್ತಿ ಮಾಡಿಕೊಳ್ಳಲಾದ ಸೊತ್ತುಗಳನ್ನು ಇಂದು ಹಸ್ತಾಂತರಿಸಲಾಯಿತು. ನಗದು, ಚಿನ್ನಾಭರಣ ಹಾಗೂ ವಾಹನ ಸೇರಿ 90, 78, 563 ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೊತ್ತುಗಳ ಪ್ರದರ್ಶನ ಮತ್ತು ಹಸ್ತಾಂತರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎಸ್ಪಿ ವಿಷ್ಣುವರ್ದನ ಸೊತ್ತುಗಳನ್ನು ಹಸ್ತಾಂತರಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು.
ನಗರದ ಡಿಎಆರ್ ಮೈದಾನದಲ್ಲಿ ಜಪ್ತಿ ಮಾಡಿಕೊಂಡ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ, ಜಿಲ್ಲೆಯಲ್ಲಿ 2020 ರಲ್ಲಿ ದಾಖಲಾಗಿದ್ದ 151 ಪ್ರಕರಣಗಳ ರೂ. 58,47,375 ಹಾಗೂ 2021 ರಲ್ಲಿ ದಾಖಲಾಗಿರುವ 161 ಪ್ರಕರಣಗಳಲ್ಲಿ ರೂ. 32,31,188 ಮೊತ್ತದ ಸ್ವತ್ತುಗಳನ್ನು ಸಂಬಂಧಿಸಿದ ನ್ಯಾಯಾಲಯದಿಂದ ಅನುಮತಿ ಪಡೆದು ವಾರಸುದಾರರಿಗೆ ಹಿಂತಿರುಗಿಸಲು ಕ್ರಮ ವಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ ಚಂದ್ರ, ಉಡುಪಿ ಡಿವೈಎಸ್ಪಿ ಸುಧಾಕರ ನಾಯ್ಕ, ಕಾರ್ಕಳ ಡಿವೈಎಸ್ಪಿ ಎಸ್ ವಿಜಯ ಪ್ರಸಾದ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
23/11/2021 02:52 pm