ಮಂಗಳೂರು: ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸುರತ್ಕಲ್ ಗೆ ಭೇಟಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಿನ್ನೆ ಸಾಯಂಕಾಲ ಈ ಘಟನೆ ನಡೆದಿದ್ದು, ಪೊಲೀಸ್ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಫಾಝಿಲ್ ಅಂತ್ಯಕ್ರಿಯೆ ಇದೀಗ ತಾನೆ ನಡೆದಿದೆ. ಶುಕ್ರವಾರದ ನಮಾಜ್ ಬಳಿಕ ತನಿಖೆ ಮುಂದುವರೆಸಲಾಗುತ್ತದೆ. ಘಟನಾ ಸ್ಥಳದಲ್ಲಿನ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಈ ಮೂಲಕ ದುಷ್ಕರ್ಮಿಗಳು ಆಗಮಿಸಿರುವ ವಾಹನದ ನಂಬರ್ ಆಧರಿಸಿ ತನಿಖೆ ನಡೆಸಲಾಗುತ್ತದೆ. ಸದ್ಯ ವಿಚಾರಣೆ ನಡೆಸುತ್ತಿದ್ದೇವೆ. ಮಂಗಳೂರು ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಈ ತನಿಖೆ ನಡೆಯುತ್ತದೆ. ಈ ಕೃತ್ಯದ ಹಿಂದೆ ಯಾರಿದ್ದಾರೆ. ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎಂಬುದನ್ನು ತನಿಖೆ ಮಾಡಲಾಗುತ್ತದೆ. ಪೊಲೀಸ್ ಇಲಾಖೆಯ ಮೇಲೆ ಜನತೆ ಇರಿಸಿರುವ ಭರವಸೆಯನ್ನು ಈಡೇರಿಸುತ್ತೇವೆ. ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಬೇಡ. ತನಿಖೆ ನಡೆಸಿದ ನಂತರ ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂದು ತಿಳಿದು ಬರುತ್ತದೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತೇವೆ ಎಂದರು.
ಮಸೂದ್ ಹತ್ಯೆ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಲಾಗಿದೆ. ಪ್ರವೀಣ್ ನೆಟ್ಟಾರು ಮರ್ಡರ್ ಕೇಸ್ ನಲ್ಲಿ ಇಬ್ಬರನ್ನು ಬಂಧಿಸಿದ್ದೇವೆ. ಮಂಗಳೂರು ಭಾಗದಲ್ಲಿ ಸ್ಪೆಷಲ್ ಡ್ರೈವ್ ನಡೆಸುತ್ತೇವೆ. ಸಾರ್ವಜನಿಕರ ಭಯ ಕಡಿಮೆ ಮಾಡುವ ಕೆಲಸ ಮಾಡುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
Kshetra Samachara
29/07/2022 02:55 pm