ಮಂಗಳೂರು: ಉಪ್ಪಿನಂಗಡಿ ಸರಕಾರಿ ಕಾಲೇಜಿನ ಹಿಜಾಬ್ ಪ್ರಕರಣದ ವರದಿಗೆ ತೆರಳಿದ ಪತ್ರಕರ್ತರ ಮೇಲೆ ನಡೆದ ಹಲ್ಲೆಯ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಹೇಳಿದರು.
ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗಾಗಿ ಮತ್ತು ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದರು.
ಕಾಲೇಜಿಗೆ ಪತ್ರಕರ್ತರು ವಾಸ್ತವತೆಯ ವರದಿ ಮಾಡಲು ತೆರಳಿದಾಗ ವಿದ್ಯಾರ್ಥಿಗಳು ಪತ್ರಕರ್ತರನ್ನು ದಿಗ್ಬಂಧಿಸಿ, ದುರ್ವರ್ತನೆ ತೋರಿಸಿದ್ದಾರೆ. ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕೈಗೊಳ್ಳಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಸರಕಾರ ಪತ್ರಕರ್ತರಿಗೆ ಸೂಕ್ತ ಭದ್ರತೆ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲಾಎಸ್ಪಿ ಭಗವಾನ್ ಹೃಷಿಕೇಶ್ ಸೋನಾವಣೆ ಅವರಿಗೂ ಮನವಿ ಸಲ್ಲಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷರಾದ ಭಾಸ್ಕರ ರೈ ಕಟ್ಟ, ರಾಜೇಶ್ ಕೆ. ಪೂಜಾರಿ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಕಾರ್ಯಕಾರಿ ಸದಸ್ಯರಾದ ವಿಲ್ಫ್ರೆಡ್, ಭರತ್ ರಾಜ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರೀಫ್ ಪಡುಬಿದ್ರಿ, ಸದಸ್ಯರಾದ ಕಿಶನ್, ಅಶೋಕ್ ಪೂಜಾರಿ ಇದ್ದರು.
=======
Kshetra Samachara
03/06/2022 03:25 pm