ಉಡುಪಿ: ಇದೊಂದು ಅಪರೂಪ ಎನ್ನಬಹುದಾದ ಪ್ರಕರಣ. ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳು ತನ್ನನ್ನು ಪ್ರೀತಿಸುವಂತೆ ಕಾಡುತ್ತಿದ್ದು ನಿತ್ಯ ಬಸ್ ನಲ್ಲಿ ಬಂದು ಚಿತ್ರಹಿಂಸೆ ನೀಡುತ್ತಿರುವುದಾಗಿ ಬಸ್ ಚಾಲಕನೊಬ್ಬ ಅಲವತ್ತುಕೊಂಡಿದ್ದಾರೆ. ಇವತ್ತು ಕರ್ತವ್ಯದಲ್ಲಿರುವಾಗಲೇ ಪಬ್ಲಿಕ್ ನೆಕ್ಸ್ಟ್ ನ್ನು ಸಂಪರ್ಕಿಸಿರುವ ಈ ಯುವಕ ತನಗೆ ಇದರಿಂದ ಕರ್ತವ್ಯ ಮಾಡಲು ಆಗುತ್ತಿಲ್ಲ. ಊರಿಡೀ ತನ್ನ ಹೆಸರು ಹೇಳಿಕೊಂಡು ತಿರುಗುವ ಈ ಯುವತಿ ,ಬಸ್ ನಲ್ಲೂ ಬಂದು ಕಂಡಕಂಡವರ ಜೊತೆ ಏನೇನೋ ಹೇಳುತ್ತಿದ್ದಾಳೆ ಎಂದು ದೂರಿದ್ದಾರೆ. ಈ ಯುವತಿಗೆ ತಾನು ಮದುವೆಯಾಗುವುದಾಗಿ ಆಗಲಿ, ಪ್ರೀತಿಸುತ್ತಿರುವುದಾಗಿ ಆಗಲಿ ಹೇಳಿಯೇ ಇಲ್ಲ. ಈ ಸಂಬಂಧ ಎರಡು ಬಾರಿ ಪೊಲೀಸರಿಗೂ ದೂರು ನೀಡಿದ್ದೇನೆ. ಈಗ ಯುವತಿ ಕೂಡ ಪೊಲೀಸರಿಗೆ ದೂರು ನೀಡಿದ್ದು ಈಗಲೂ ಚಿತ್ರ ಹಿಂಸೆ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ.
ಏನಿದು ಪ್ರಕರಣ?
ಕಾಳಾವರ- ಸಲ್ವಾಡಿಯ ಯುವತಿ ಶಾಂತಿ ಶೆಟ್ಟಿ ಎಂಬುವರ ವಿರುದ್ಧ ಶಿರಿಯಾರ ನಿವಾಸಿ ಹರ್ಷ ಮೊಗವೀರ ಈ ಮೊದಲೇ ಕಂಡ್ಲೂರು ಮತ್ತು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಹಿಳಾ ಆಯೋಗಕ್ಕೂ ದೂರು ನೀಡಲು ಹೋದಾಗ ಅಲ್ಲಿ ನೀವು ದೂರು ನೀಡಲು ಬಂದ ಬಗ್ಗೆ ಸಂದರ್ಶಕರ ಪುಸ್ತಕದಲ್ಲಿ ದಾಖಲಿಸಿ ಎಂದು ಹೇಳಿ ಕಳಿಸಿದ್ದರು. ಹರ್ಷ ಖಾಸಗಿ ಬಸ್ ನಲ್ಲಿ ಚಾಲಕನಾಗಿ ದುಡಿಯುತ್ತಿದ್ದು ಇವರ ಬಸ್ ನಲ್ಲಿ ಶಾಂತಿ ಶೆಟ್ಟಿ ಪ್ರಯಾಣಿಸುತ್ತಾಳೆ.ಈ ಮಧ್ಯೆ ಏನಾಯ್ತೋ ಗೊತ್ತಿಲ್ಲ,ಆತನನ್ನು ಪ್ರೀತಿಸುತ್ತಿರುವುದಾಗಿ ಯುವತಿ ಹೇಳಿಕೊಳ್ಳತೊಡಗಿದ್ದಾಳೆ.ಹರ್ಷ ಮೊಗವೀರನ ನಕಲಿ ಐಡಿ ಮಾಡಿ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿದ್ದಾರೆ. 2019 ರಲ್ಲೇ ಹರ್ಷ ಈ ಸಂಬಂಧ ಪೊಲೀಸರ ಮೊರೆ ಹೋಗಿದ್ದು ಬಳಿಕ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ನಂತರ ಉಡುಪಿ ಸೆನ್ ಠಾಣೆಗೂ ಹರ್ಷ ನ್ಯಾಯ ನೀಡುವಂತೆ ಮೊರೆ ಹೋಗಿದ್ದರು.
ಕೆಲವು ದಿನಗಳ ಹಿಂದೆ ಶಾಂತಿ ಶೆಟ್ಟಿ ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದು ಹರ್ಷ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ದೂರಿದ್ದಳು. ನಂತರದ ದಿನಗಳಲ್ಲೂ ಈಕೆ ಹರ್ಷನ ಬಸ್ ನಲ್ಲಿ ಬಂದು ಪ್ರಯಾಣಿಕರು ಮತ್ತು ಕಂಡಕಂಡವರ ಜೊತೆಯೆಲ್ಲ ತನ್ನನ್ನು ಆತ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ಹೇಳಿದ್ದಾನೆ ಎಂದೆಲ್ಲ ಹಿಂಸೆ ನೀಡುತ್ತಿರುವುದಾಗಿ ಹರ್ಷ ಆರೋಪಿಸಿದ್ದಾರೆ. ಇವತ್ತು ಉಡುಪಿ ಸೆನ್ ಠಾಣೆಗೆ ಆಗಮಿಸಿ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಪೊಲೀಸರಲ್ಲಿ ಮತ್ತೊಮ್ಮೆ ಹೇಳಿಕೊಂಡಿದ್ದು ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ.
PublicNext
13/09/2022 10:28 pm