ಸುಳ್ಯ: ಜಾಲ್ಸೂರು ಗ್ರಾಮದ ಅಡ್ಕಾರ್ ವಿನೋಬನಗರ ವಿವೇಕಾನಂದ ಖಾಸಗಿ ಶಾಲೆಯಲ್ಲಿದ್ದ ಮಕ್ಕಳ ಬಿಸಿಯೊಟದ ಹಳೆಯ ಕೊಳೆತ ಅಕ್ಕಿಯನ್ನು ಸ್ಥಳೀಯ ಅಡ್ಕಾರ್ ನಲ್ಲಿನ ಪಡಿತರ ಅಂಗಡಿ ಮೂಲಕ ಹೊಸ ಅಕ್ಕಿಯೊಂದಿಗೆ ಪರಸ್ಪರ ಬದಲಾಯಿಸಿಕೊಳ್ಳುವ ಮೂಲಕ ಗ್ರಾಮಸ್ಥರಿಗೆ ಹುಳುಕು ಅಕ್ಕಿಯನ್ನು ವಿತರಿಸಲು ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಶಾಲೆಯಲ್ಲಿ ಈ ಹಿಂದೆ ಇದ್ದ ಅಕ್ಕಿಯು ವಾಸನೆ ಬರುತ್ತಿದೆ ಎಂದು ಸಿಬ್ಬಂದಿ ದೂರಿತ್ತ ಹಿನ್ನೆಲೆಯಲ್ಲಿ ಪಡಿತರ ಅಂಗಡಿಯಲ್ಲಿನ ಅಕ್ಕಿಯೊಂದಿಗೆ ಬದಲಾವಣೆ ಮಾಡಲು ಶಾಲಾ ಮುಖ್ಯ ಶಿಕ್ಷಕರನ್ನೇ ಮುಂದೆ ನಿಲ್ಲಿಸಿ ಶಾಲಾ ಆಡಳಿತ ಮಂಡಳಿ ಮುಂದಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.
ಮಾತ್ರವಲ್ಲದೇ 50ಕೆಜಿ ಬರುವ ಈ ಅಕ್ಕಿ ಚೀಲ ಹೊರಲು ಸ್ವತಃ ಶಾಲಾ ಮಕ್ಕಳನ್ನೇ ಪಾಠದ ಸಮಯ ಬಾಲ ಕಾರ್ಮಿಕರ ಹಾಗೆ ದುಡಿಸಲಾಗಿದೆ ಎನ್ನಲಾಗಿದೆ. ವಿವೇಕಾನಂದ ಶಾಲಾ ಮುಖ್ಯ ಶಿಕ್ಷಕ ಜಯ ಪ್ರಕಾಶ ಕಾರಿಂಜ ಅವರು ಶಾಲೆಗೆ ಬಿಸಿಯೂಟಕ್ಕೆ ಬಂದ ಅಕ್ಕಿಯನ್ನು ಮೇಲಧಿಕಾರಿಗಳ ಗಮನಕ್ಕೆ ತಾರದೇ ಸ್ಥಳೀಯ ಅಡ್ಕಾರ್ ಪಡಿತರ ಅಂಗಡಿಯಲ್ಲಿ ಬದಲಾವಣೆ ಮಾಡಿದ್ದಾರೆ ಎಂಬ ಆರೋಪವಿದೆ.
ಈ ಕಳ್ಳಸಾಗಾಣಿಕೆಗೆ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಂಘ ಇದರ ಅಡ್ಕಾರ್ ಶಾಖಾ ಮ್ಯಾನೇಜರ್ ಗಂಗಾಧರ್ ಅಡ್ಕರ್ ಸಾಥ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಅವರು ತಾನು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಳಿ ಅಕ್ಕಿಯ ಬದಲಿಗೆ ಕುಚಲಕ್ಕಿ ಬದಲಾವಣೆ ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕರು ತಿಳಿಸಿದ್ದು ಇದು ಕಾನೂನು ಬಾಹಿರ ಕೆಲಸ. ಮಾತ್ರವಲ್ಲದೇ ಯಾವುದೇ ಮೇಲಧಿಕಾರಿಗಳಿಗೂ ಈ ಬಗ್ಗೆ ಶಿಕ್ಷಕರು ಮಾಹಿತಿ ನೀಡಿ ಅನುಮತಿ ಪಡೆದಿಲ್ಲ. ಆದುದರಿಂದ ಕೂಡಲೇ ಪಡಿತರ ಅಂಗಡಿಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ತಪ್ಪಿಗಸ್ತರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
Kshetra Samachara
08/06/2022 05:54 pm