ಸುಳ್ಯ: ಹಳೆ ಕಟ್ಟಡದ ಗೋಡೆ ಕುಸಿದು ಬಿದ್ದು ಗುಜರಿ ವ್ಯಾಪಾರಿಯೊಬ್ಬರು ಮೃತಪಟ್ಟ ದಾರುಣ ಘಟನೆ ಇಂದು ಬೆಳಗ್ಗೆ ಸುಳ್ಯದ ಗಾಂಧಿನಗರದಲ್ಲಿ ನಡೆದಿದೆ. ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಗೋಡೆ ನೆಲಸಮವಾಗಿ ಈ ದುರಂತ ಸಂಭವಿಸಿದೆ. ಅಬ್ದುಲ್ ಖಾದರ್ (ಅಂದುಕಾರ್) ಮೃತಪಟ್ಟವರು.
ಖಾದರ್ ಅವರು ಹಲವಾರು ವರ್ಷಗಳಿಂದ ಸುಳ್ಯದ ಎಪಿಎಂಸಿ ಬಳಿ ಗುಜರಿ ವ್ಯಾಪಾರ ಮಾಡುತ್ತಿದ್ದರು. ಹಳೆ ಕಟ್ಟಡದ ಕಬ್ಬಿಣ ಸಾಮಗ್ರಿ ಖರೀದಿಸಿ ಮಾರುವುದು ಅವರ ವೃತ್ತಿ. ಅದರಂತೆ ಕಳೆದ ವರ್ಷದಿಂದ ವ್ಯವಹಾರ ಸ್ಥಗಿತಗೊಳಿಸಿರುವ ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯಲ್ಲಿದ್ದ ಕಬ್ಬಿಣದ ಸಾಮಗ್ರಿಗಳನ್ನು ಸಂಗ್ರಹಿಸುವ ವೇಳೆ ದುರ್ಘಟನೆ ನಡೆದಿದೆ.
ಅಬ್ದುಲ್ ಖಾದರ್ ತಮ್ಮ ಕೆಲಸದಾಳುಗಳ ಜೊತೆ ಇಂದು ಬೆಳಗ್ಗೆ ಗೋಡೆ ಮೇಲ್ಭಾಗದಲ್ಲಿದ್ದ ಕಬ್ಬಿಣದ ಟ್ರಸ್ ಅನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಗೋಡೆ ಮಗುಚಿ ಖಾದರ್ ಅವರ ಮೇಲೆಯೇ ಬಿದ್ದುದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಳ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Kshetra Samachara
05/11/2021 03:16 pm