ಉಡುಪಿ: ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೋರ್ವಳು ಅರ್ಧ ಗಂಟೆ ವರೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ಕರ್ತವ್ಯ ನಿಭಾಯಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಬ್ರಹ್ಮಾವರ ತಾಲೂಕು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವರ್ಷಾ ಅವರು ಜಿಪಂ ಸಿಇಒ ಕುರ್ಚಿಯಲ್ಲಿ ಆಸೀನರಾಗಿ, ತಮ್ಮೆದುರು ಕುಳಿತಿದ್ದ ಸ್ವತಃ ಜಿಪಂ ಸಿಇಒ ಡಾ.ನವೀನ್ ಭಟ್ ಅವರನ್ನು ಪ್ರಶ್ನಿಸಿ ವಿವರ ಪಡೆದುಕೊಂಡರು.
ಸುಮಾರು 30 ನಿಮಿಷ ಕಾಲ ಕಾರ್ಯನಿರ್ವಹಣೆ ಮಾಡಿದ ವರ್ಷಾ, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ವಿಲೇವಾರಿಗೆ, ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆಗೆ ಹಾಗೂ ನಿರುದ್ಯೋಗ ನಿವಾರಣೆಗೆ ಏನೇನು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಇಒ ಡಾ.ನವೀನ್ ಭಟ್ ಅವರು ಅರ್ಧ ಗಂಟೆ ಕಾಲ ತಮ್ಮ ಹುದ್ದೆ ಅಲಂಕರಿಸಲು ವಿದ್ಯಾರ್ಥಿನಿಗೆ ಆಸನ ಬಿಟ್ಟುಕೊಟ್ಟು, ಆಕೆಯಲ್ಲಿ ನೀವು ಈಗ ಸಮಾಜ ಸುಧಾರಣೆಗೆ ಏನೇನು ಸಲಹೆ ನೀಡುತ್ತೀರಿ ಎಂದು ಪ್ರಶ್ನಿಸಿದರು. ವರ್ಷಾ ಈ ಕುರಿತು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ವಿಲೇವಾರಿ, ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಹಾಗೂ ನಿರುದ್ಯೋಗ ನಿವಾರಣೆ ಕುರಿತು ಚರ್ಚಿಸಿದರು.
Kshetra Samachara
31/01/2021 09:54 am